ಮಕ್ಕಳಿಗೆ ಜೀವನ ಕೌಶಲ ಕಲಿಸಿ
ಬೀದರ್: ಆ.28:ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಕೌಶಲಗಳನ್ನು ಕಲಿಸಬೇಕು ಎಂದು ಮನೋವಿಜ್ಞಾನಿಯೂ ಆದ ಶಿಕ್ಷಣ ತಜ್ಞೆ ಸ್ವರ್ಣಲತಾ ಅಯ್ಯರ್ ಹೇಳಿದರು.
ನಗರದ ಇನ್ಫಿನಿಟಿ ಶಾಲೆಯ ನೂತನ ಕ್ಯಾಂಪಸ್ ನಲ್ಲಿ ಈಚೆಗೆ ನಡೆದ ‘ಮನದಾಳದ ಮಾತು’ ಮಾಸಿಕ ಸಂಭಾಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಹೊಂದಾಣಿಕೆ, ಶಿಸ್ತು, ಸಮಯಪ್ರಜ್ಞೆ ಮೊದಲಾದವುಗಳನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
ಮಕ್ಕಳು ಪಾಲಕರನ್ನು ಅನುಕರಿಸುವ ಕಾರಣ ಅವರ ಎದುರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಗಂಡು ಹಾಗೂ ಹೆಣ್ಣು ಮಕ್ಕಳ ಮಧ್ಯೆ ಯಾವುದೇ ಭೇದ ಭಾವ ಮಾಡಬಾರದು ಎಂದು ಹೇಳಿದರು.
‘ಮನದಾಳದ ಮಾತು’ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಸಾಧಕರ ಪ್ರೇರಣಾದಾಯಕ ಕಥೆ ಹಾಗೂ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಇದು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಸಮಾಜದ ಇತರರಿಗೆ ಪ್ರೇರಣೆ ನೀಡಲು ಸಹಕಾರಿಯಾಗಲಿದೆ ಎಂದು ಶಾಲೆಯ ಸಂಸ್ಥಾಪಕ ನಿರಂಜನ್ ಶೀಲವಂತ ತಿಳಿಸಿದರು.
ಮನದಾಳದ ಮಾತು ಮೂರನೇ ಮಾಸಿಕ ಸಂಭಾಷಣೆ ಕಾರ್ಯಕ್ರಮ ಸೆಪ್ಟೆಂಬರ್ 28 ರಂದು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.