ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು : ಢೋಲೆಪಾಟೀಲ
ಭಾಲ್ಕಿ:ಆ.28: ಸತತ ಪ್ರಯತ್ನವೇ ಯಶಸ್ಸಿನ ಗುಟ್ಟಾಗಿದೆ ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ| ಅಂಕುಶ ಢೋಲೆಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಪ.ಪೂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮವರ್ಷದ ಪಿ.ಯೂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಉತ್ತಮ ಗುರಿ ಮತ್ತು ಸತತ ಪ್ರಯತ್ನವಿದ್ದರೆ ಮಾತ್ರ ಯಶಸ್ವಿಯಾಗಬಹುದು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಿಂಗೈಕ್ಯ ಡಾ| ಚನ್ನಬಸವ ಪಟ್ಟದ್ದೇವರು ಈ ಭಾಗದ ಮಹಿಳೆಯರ ಸ್ವಾವಲಂಬನೆಗಾಗಿ ಅಕ್ಕಮಹಾದೇವಿ ಮಹಿಳಾ ಕಾಲೇಜು ಪ್ರಾರಂಭಿಸಿದ್ದಾರೆ. ಅದಕ್ಕೆ ಮಾಜಿ ಸಚಿವ ಶತಾಯುಸ್ಸಿ ಡಾ| ಭೀಮಣ್ಣ ಖಂಡ್ರೆಯವರು ಸಾಥ್‍ನೀಡಿ ಈ ಶಿಕ್ಷಣ ಸಂಸ್ಥೆ ಇಷ್ಟು ಎತ್ತರಮಟ್ಟಕ್ಕೆ ಬೆಳೆಯುವಲ್ಲಿ ಸಹಕರಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿ, ಯಶಸ್ವಿ ಬದುಕು ಕಂಡುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರೋಹಿತ ವೈರಾಗೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮುಂದಿನ ಏಳು ವರ್ಷಗಳ ಸಾಧನೆಯ ಅರಿವಿರಬೇಕು. ಅಂತಹ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಬಹುದು ಎಂದು ಹೇಳಿದರು.
ಸದ್ಗುರು ವಿದ್ಯಾಲಯದ ಮುಖ್ಯಸ್ಥ ಅಕ್ಷಯಕುಮಾರ ಸೋಮನಾಥಮುದ್ದಾ ಮಾತನಾಡಿ, ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಜ್ಞಾನವಿರಬೇಕು. ಜ್ಞಾನ ಯಾರೂ ಕಸಿಯದ ಆಸ್ತಿ ಎಂದು ಹೇಳಿದರು.
ಹರ್ಟಫುಲ್‍ನೆಸ್ ಪ್ರಶಿಕ್ಷಕ ಕಿಶನರಾವ ಜಾಧವ ಮಾತನಾಡಿ, ಏಕಾಗ್ರತೆ ಗಳಿಸಲು ಧ್ಯಾನದ ಅವಶ್ಯಕತೆ ಇದೆ. ಏಕಾಗ್ರತೆಯಿಂದ ಸಾಧನೆ ಮಾಡಿದಲ್ಲಿ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದರು. ಬಿಸಿಎಮ್ ಅಧಿಕಾರಿ ವಿಜಯಮಾಲಾ ವಗ್ಗೆ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿದರು. ಪ್ರಾಂಶುಪಾಲ ಧೋಂಡಿಬಾ ಭುಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಓಂಕಾರ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಧನರಾಜ ಮೇತ್ರೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸಂಜೀವಕುಮಾರ, ವಿಜಯಕುಮಾರ, ವಸತಿ ನಿಲಯದ ಮೇಲ್ವಿಚಾರಕಿ ರೇಣುಕಾ, ಗುಂಡಮ್ಮಾ, ಎನ್.ಎಸ್.ಎಸ್ ಅಧಿಕಾರಿ ಭೀಮರಾವ.ಜಿ, ಡಾ| ಕಾಂತರಾಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥನಾಗೀತೆ ಹಾಡಿದರು. ರೋಹಿಣಿ ಸ್ವಾಗತಗೀತೆ ಹಾಡಿದರು.
ಓ.ಕೆ.ಸೂರ್ಯವಂಶಿ ಸ್ವಾಗತಿಸಿದರು. ಭೀಮರಾವ ಗಿರಿ ನಿರೂಪಿಸಿದರು. ವಿಜಯಕುಮಾರ ವಾರದ ವಂದಿಸಿದರು.