ಶೈಕ್ಷಣಿಕ ಅಭಿವೃದ್ಧಿಯಲ್ಲಿ ಹಿರೇಮಠ ಸಂಸ್ಥಾನದ ಪಾತ್ರ ಹಿರಿದು : ರಿತೇಶಕುಮಾರ ಸಿಂಗ್
ಔರಾದ್ :ಆ.28: ಹಿರೇಮಠ ಸಂಸ್ಥಾನದ ಧಾರ್ಮಿಕ, ಸಮಾಜಿಕ, ಶಿಕ್ಷಣಿಕ ಕಾರ್ಯಗಳು ಮಾದರಿ ಎನಿಸಿವೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಹಿರೇಮಠ ಸಂಸ್ಥಾನದ ಪಾತ್ರ ಹಿರಿದಾಗಿದೆ ಎಂದು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶಕುಮಾರ ಸಿಂಗ್ ಹೇಳಿದರು.
ತಾಲೂಕಿನ ಸಂತಪೂರ ಗ್ರಾಮದಲ್ಲಿ ಗುರುವಾರ ಸಿದ್ದರಾಮೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಭಾಲ್ಕಿ ಹಿರೇಮಠ ಸೇವಾ ಮನೋಭಾವ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದೆ ಎಂದು ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಲ್ಲಿ ಮಠವನ್ನು ಬಿಟ್ಟು ಹೊರಗೆ ಬರದ ಅದೆಷ್ಟೋ ಸ್ವಾಮಿಜಿಗಳಿದ್ದಾರೆ. ಅವರು ಭಾಲ್ಕಿ ಶ್ರೀಗಳ ಸಾಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ರಿತೀಶ್‍ಕುಮಾರ ಸಿಂಗ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೇಲೆ ಶಿಕ್ಷಣದಲ್ಲಿ ಅನೇಕ ಬದಲಾವಣೆಯಾಗಿದೆ. ಅವರ ಕಾರ್ಯಗಳು ಮಾದರಿಯಾಗಿವೆ. ಸರಳ ಸಜ್ಜನಿಕೆ ವ್ಯಕ್ತಿತ್ವ ಅವರದಾಗಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿದ ಡಾ. ಚನ್ನಬಸವ ಪಟ್ಟದ್ದೇವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ರಾಜನಿಗೆ ರಾಜ್ಯದಲ್ಲಿ ಮಾತ್ರ ಗೌರವ ಸಿಗುತ್ತದೆ. ಆದರೆ ಜ್ಞಾನಿಗೆ ಎಲ್ಲೆಡೆ ಗೌರವ ಸಿಗುತ್ತದೆ ಎಂದರು.
ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬಡೋಲೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್, ಡಿಡಿಪಿಐ ಸಲೀಂ ಪಾಷಾ, ಬಿಇಒ ಸುಧಾರಾಣಿ, ಮುಖಂಡ ಬಂಡೆಪ್ಪ ಕಂಟೆ, ಬಸವರಾಜ ಬಿರಾದಾರ್, ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ಶಿವಕುಮಾರ ಹಿರೇಮಠ, ಗಜಾನಂದ ಮುಂಗೆ, ಗುರ್‍ಪ್ರಿತ್ ಕೌರ್, ಪಿಡಿಒ ಸಂತೋಷ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಜ್ಯೋತಿ ಸೂರ್ಯಕಾಂತ ಅಲಮಾಜೆ ಬಸವಗುರು ಪೂಜೆ ನೇರವೇರಿಸಿದರು. ಸ್ಥಾನಿಕ ಕಮಿಟಿ ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತವಿಕ ಮಾತನಾಡಿದರು. ಆಡಳಿತಾಧಿಕಾರಿ ಮೋಹನರಡ್ಡಿ ಸ್ವಾಗತಿಸಿದರು. ಮಾರುತಿ ಗಾದಗೆ ನಿರೂಪಿಸಿದರು. ವಿಜಯಕುಮಾರ ಪಾಟೀಲ್ ವಂದಿಸಿದರು. ಹವಗಿರಾವ ಶರಣರು ವಚನ ಗಾಯನ ಮಾಡಿದರು.