ಶಾಂತಿ ಸುವ್ಯವಸ್ಥಿತ ಹಬ್ಬಗಳ ಆಚರಣೆಗೆ ಕರೆ
ಗದಗ,ಆ28: ಗದಗ ಜಿಲ್ಲೆಯೂ ಕೊಮು ಸೌಹಾರ್ದತೆ ಹಾಗೂ ಶಾಂತಿ ಸಂಯಮಕ್ಕೆ ಹೆಸರುವಾಸಿ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಮತಿಗಾಗಿ ಏಕಗವಾಕ್ಷಿ ಕೇಂದ್ರ
ಗಣೇಶವನ್ನು ಕೂಡಿಸುವ ಸಂಘ ಸಂಸ್ಥೆಗಳು ಹಾಗೂ ಮಂಡಳಿಗಳು ಕಾನೂನು ಸುವ್ಯವಸ್ಥೆ ಪಾಲಿಸಿ, ಗಣಪತಿ ಕೂಡಿಸಲು ಬೇಕಾದ ವಿವಿಧ ಇಲಾಖೆಗಳ ಅನುಮತಿಯನ್ನು ಒಂದೇ ಸ್ಥಳದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಳಿಕರಣಗೋಳಿಸಲು ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಗದಗ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಸಪ್ಟೆಂಬರ್ 1 ರಿಂದ ಗಣೇಶ ಆಚರಣೆ ಕುರಿತಂತೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಸರ್ವರು 9ನೇ ದಿನ ಗಣೇಶ ವಿಸರ್ಜಸಿ
ಪ್ರತಿ ವರ್ಷ ಗಣೇಶಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿ, ಅಷ್ಟೇ ಸಂಭ್ರಮದಿಂದ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ಬಡಾವಣೆಗಳಲ್ಲಿ ಗಣೇಶ ವಿಸರ್ಜನೆಯು ಒಂದೊಂದು ದಿನ ಮಾಡುವುದರಿಂದ ಕಾನೂನು ಸುವ್ಯವಸ್ಥಿತೆ ಹಾಗೂ ಭದ್ರತೆ ಒದಗಿಸುವುದು ಕಷ್ಟ ಸಾದ್ಯ. ಆದ್ದರಿಂದ ಈ ವರ್ಷ ಗಣೇಶ ವಿಸರ್ಜನೆಯನ್ನು 9ನೇ ದಿನದಂದು ಎಲ್ಲರೂ ಸೇರಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ವಿಸರ್ಜನೆ ಕಾರ್ಯವನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಗಣೇಶ ವಿಸರ್ಜನೆಯನ್ನು 9ನೇ ದಿನ ಬೆಳ್ಳಿಗೆ 9 ಗಂಟೆಯಿಂದ ರಾತ್ರಿ 10 ಗಂಟೆಯೊಳಗಾಗಿ ಶಾಂತಿಯುವಾಗಿ ಪೂರ್ಣಗೊಳಿಸಬೇಕು ಅದಕ್ಕೆ ದೊಡ್ಡ ಗಾತ್ರದ ಗಣೇಶ ವಿಸರ್ಜನೆಗೆ ಅಗತ್ಯವಿರುವ ಕ್ರೇನ್ ವ್ಯವಸ್ಥೆಯನ್ನು ಒದಗಿಸಲಾಗುವುದು, ವಿಸರ್ಜನೆ ದಿನ ಕೆರೆ ಹಳ್ಳ ನದಿ ಹತ್ತಿರ ಸಾರ್ವಜನಿಕರು ಎಚ್ಚರಿಕೆಯಿಂದ ವಿಸರ್ಜನೆಗೆ ಮುಂದಾಗಬೇಕು.
ಗಣೇಶ ವಿಸರ್ಜನೆಯ ಮೆರವಣಿಗೆ ಮಾರ್ಗಗಳನ್ನು ಮೊದಲೇ ನಿಗದಿಪಡಿಸಿ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಒದಗಿಸಬೇಕು ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಮೆರವಣಿಗೆ ಮಾರ್ಗವನ್ನು ಬದಲಾಯಿಸ ಕೂಡದು ಎಂದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ ಮಾತನಾಡಿ, ಕೋಮು ಗಲಭೆಗೆ ಆಸ್ಪದ ಕೊಡದೇ ಶ್ರೀ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸಂರ್ಪಧಾಯಿಕವಾಗಿ ಆಚರಿಸೋಣ ಎಂದು ಹೇಳಿದರು.
ಗಣೇಶ ಸಮಿತಿಯ ಮಹಾಮಂಡಳದ ಅಧ್ಯಕ್ಷ ರಾಜು ಮಾತನಾಡಿ, ಗಣೇಶ ವಿಸರ್ಜನೆಯನ್ನು ನಾವೆಲ್ಲರೂ 9 ನೇ ದಿನದಂದೇ ಮಾಡಲೂ ಮುಂದಾಗೋಣ ಶಾಂತಿ ಸೌಹಾರ್ದಯುತ ಹಬ್ಬ ಆಚರಣೆಗೆ ಎಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ ಸಿಇಒ ಭರತ್ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ ಬಿ ಸಂಕದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.