ಮೀನುಗಾರರು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ:ಮೀನುಗಾರಿಕೆ ಸಚಿವ ಮಂಕಾಳ ವೈದ್ಯ
ಬೀದರ್ :ಅ.28ಃ ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ದಿ ಸಾದ್ಯ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಬೀದರ ನಗರದ ಡಾ.ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮಂದಿರದಲ್ಲಿ ಟೋಕರೆ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತಿರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಜಾಗೃತಿ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದಲ್ಲದೇ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು.
ಕೋಳಿ ಕಬ್ಬಲಿಗ ಸಮಾಜದ ವಿದ್ಯಾರ್ಥಿಗಳಿಗೆ ಸರ್ಕಾರದ ಶೈಕ್ಷಣಿಕ ಯೋಜನೆಗಳ ಜತೆಗೆ ಮೀನುಗಾರಿಕೆ ಇಲಾಖೆಯಿಂದ ಶಿಷ್ಯ ವೇತನದ ಸೌಲಭ್ಯವೂ ಇದೆ. 8-10 ತರಗತಿ ಮಕ್ಕಳಿಗೆ 2 ಸಾವಿರ ರೂ., ಪಿಯುಸಿ, ಐಟಿಐ ಮಕ್ಕಳಿಗೆ 2.5 ಸಾವಿರ (ಗಂಡು), 3 ಸಾವಿರ (ಹೆಣ್ಣು), ಎಲ್‍ಎಲ್‍ಬಿ, ಪ್ಯಾರಾ ಮೇಡಿಕಲ್ ಓದುತ್ತಿರುವ ವಿದ್ಯಾರ್ಥಿಗೆ 7 ಮತ್ತು ವಿದ್ಯಾರ್ಥಿನಿಗೆ 8 ಸಾವಿರ, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗೆ 10 ಮತ್ತು ವಿದ್ಯಾರ್ಥಿನಿಗೆ 11 ಸಾವಿರ ರೂ. ಶಿಷ್ಯವೇತನ ನೀಡಲಾಗಿತ್ತಿದೆ. ಅಲ್ಲದೇ ಐಎಎಸ್, ಐಪಿಎಸ್ ಇತರೆ ಉನ್ನತ ಶಿಕ್ಷಣಕ್ಕಾಗಿ ಶಿಷ್ಯವೇತನ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಸಾಹಿತಿ, ಕಥೆಗಾರ್ತಿ ಪಾರ್ವತಿ ಸೋನಾರೆ ಸಮಾಜ ಸಂಘಟನೆ ಕುರಿತು ಉಪನ್ಯಾನ ನೀಡಿ, ಇತಿಹಾಸ ಮಾಹಾಪುರಷರು ಜನಿಸಿದ ಸಮಾಜ ಇದಾಗಿದೆ. ಆದರೇ ಸಮುದಾಯ ತೀರಾ ಹಿಂದುಳಿದಿದೆ. ಯುವ ಸಮೂಹ ಸಮಾಜದ ಈ ರಥ ಹೊತ್ತು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ಹಳ್ಳಿಖೇಡ (ಕೆ) ವಾಡಿ ಮಹರ್ಷಿ ವಾಲ್ಮೀಕಿ ಆಶ್ರಮದ ದತ್ತಾತ್ರೇಯ ಗುರುಜಿ ಸಾನಿಧ್ಯ ವಹಿಸದರು. ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಆಯೋಜಕರಾದ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾಡನಾಡಿದರು. ಇದಕ್ಕೂ ಮುನ್ನ ಅಂಬಿಗರ ಚೌಡಯ್ಯ ಹಾಗೂ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು. ಪೌರಾಡಳಿತ ಸಚಿವ ರಹೀಂಖಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಬೀದರ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣಪ್ಪಾ ಕಮಕನೂರ್, ಚಂದ್ರಶೇಖರ್ ಪಾಟೀಲ್ ಹುಮನಾಬಾದ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಚಂದ್ರಾಸಿಂಗ್, ರಾಹುಲ್ ಮಿಶ್ರಾ, ಮಾರುತಿ ಬೌದ್ಧೆ, ರಾಜಕುಮಾರ ಕರ್ಣೆ, ವಿಜಯಕುಮಾರ ಸೋನಾರೆ, ಶಾಂತಪ್ಪಾ ಜಿ. ಪಾಟೀಲ್, ಅಮೃತರಾವ್ ಚಿಮಕೋಡೆ, ಅರುಣಕುಮಾರ ಬಾವಗಿ, ನಾರಾಯಣರಾವ್ ಭಂಗಿ, ಸುನೀಲ ಖಾಸೆಂಪೂರ್, ಮಾಣೀಕ ನೇಳಗಿ, ನಂದಕುಮಾರ ಜಮಗಿಕರ್, ಪಾಂಡುರಂಗ್ ಗೂರುಜಿ, ಸಿದ್ದು ಅಷ್ಟೂರೆ, ಸರಸ್ವತಿ ಜಮಾದಾರ್, ಶಿವಾನಂದ ಪಾಟೀಲ್, ಶಿವರಾಜ ಜಮಾದಾರ್, ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಚಂದ್ರಕಾಂತ ಹಳ್ಳಿಖೇಡಕರ್ ಸ್ವಾಗತಿಸಿದರು. ಮಾರುತಿ ಮಾಸ್ಟರ್ ನಿರೂಪಿಸಿದರೇ ಸತ್ಯಪ್ರಕಾಶ ಹಳ್ಳಿಖೇಡಕರ್ ವಂದಿಸಿದರು.
ಟೋಕರೆ ಕೋಳಿಯ ಪರ್ಯಾಯ ಪದಗಳಾದ ಕೋಳಿ-ಕಬ್ಬಲಿಗ ಸೇರಿದಂತೆ ಇನ್ನಿತರ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರ್ಪಡೆ ಕಾಲ ಸಮೀಪವಿದೆ. ಈಗಾಗಲೇ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಕೋಳಿ ಕಬ್ಬಲಿಗ ಸೇರಿ ಇತರೆ ಉಪಜಾತಿಗಳ ಅಧ್ಯಯನದ ಎಲ್ಲ ವಿವರಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ರಾಜ್ಯ ಸರಕಾರ ತನ್ನ ಕೆಲಸ ಮಾಡಿದೆ. ಈಗ ಕೇಂದ್ರವು ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ ಎಂದರು. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶೀಸಿರುವ ಟೋಕರೆ ಕೋಳಿ ಸಮಾಜದ ಭವನಕ್ಕೆ ಅಗತ್ಯ ಭೂಮಿ ಹಾಗೂ ಅನುದಾನವನ್ನು ಒದಗಿಸಿ ಕೊಡುವೆ ಎಂದು ಭರವಸೆ ನೀಡಿದರು. ವಿಧಾನ ಸೌಧ ಮುಂಭಾಗ ನಿಜ ಶರಣ ಅಂಬಿಗರ ಚೌಡಯ್ಯ ನವರ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆಗೆ ನನ್ನ ಬೆಂಬಲವಿದೆ ಎಂದು ಸಚಿವ ಖಂಡ್ರೆ ಘೋಷಿಸಿದರು.