ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವೈಭವ ನಾಳೆಯಿಂದ
ಕಲಬುರಗಿ,ಅ.2: ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ 36ನೇ ನವರಾತ್ರಿ ಉತ್ಸವ ಅ.3 ರಿಂದ 12ರವರೆಗೆ ನೆರವೇರಿಸಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣರಾವ ಕುಲಕರ್ಣಿ ತಿಳಿಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಸುಪ್ರಭಾತ ಕಾರ್ಯಕ್ರಮದೊಂದಿಗೆ ಆರಂಭಿಸಿ, ತಡರಾತ್ರಿವರೆಗೂ ವಿವಿಧ ಭಜನೆಗಳು, ವಾಹನ ಸೇವೆ, ಸಂಗೀತ ಕಾರ್ಯಕ್ರಮಗಳು, ಪಂ. ಗೋಪಾಲಾಚಾರ್ಯ ಅಕಮಂಚಿ ಅವರಿಂದ ಶ್ರೀ ವೆಂಕಟೇಶ್ವರ ಮಹಾತ್ತೆ ಪ್ರವಚನ ಜರುಗಲಿದೆ. 12ರಂದು ಸಾಯಂಕಾಲ 5 ಗಂಟೆಗೆ ಶಮಿ ಪೂಜೆ, ನಂತರ ಶ್ರೀ ಲಕ್ಷ್ಮೀ ವೇಂಕಟೇಶ್ವರ ದೇವರ ರಥೋತ್ಸವ, ಪ್ರವಚನ ಮಂಗಳ, ಪ್ರತಿನಿತ್ಯ ನೈವೇದ್ಯ, ಇನ್ನೂ ಹಲವಾರು ಭಕ್ತಿ ನಮನಗಳನ್ನು ಹಮ್ಮಿಕೊಳ್ಳಲಾಗಿದೆ. ಪದ್ಮಾವತಿ ಭಜನಾ ಮಂಡಳಿಯಿಂದ 4ರಂದು ಒಂದು ಲಕ್ಷ ಗೆಜ್ಜೆ ವಸ್ತ್ರಗಳನ್ನು ಭಗವಂತನಿಗೆ ಸಮರ್ಪಿಸಲಾಗುತ್ತದೆ. ದೇವಸ್ಥಾನದ ಪದಾಧಿಕಾರಿಗಳಾದ ಗೋವರ್ಧನರಾವ ದೇಶಪಾಂಡೆ, ವಿದ್ಯಾ ಸಾಗರ ಕುಲಕರ್ಣಿ, ಪಿ.ಎನ್.ಜೋಶಿ, ಶ್ರೀನಿವಾಸರಾವ ಶಿರಬೂರು, ಮೋಹನರಾದ ಚಿಮ್ಮನಚೌಡ, ನಾಗೇಶ ಶಿಂಧೆ, ವಿಜಯಾಬಾಯಿ,ಅರ್ಚಕರಾದ ಶ್ರೀನಿವಾಸ ಆಚಾರ್ಯ ನೆಲೋಗಿ, ಬಾಬಣ್ಣ ಮೈನಾಳ, ಜಯತೀರ್ಥ, ದೀಪಾ ಸಾವಳಗಿ ಮುಂತಾದವರು ಪ್ರತಿನಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.