ತರಬೇತಿ ಕಾರ್ಯಕ್ರಮ
ನವಲಗುಂದ,ಆ28: ಜಾನುವಾರು ಗಣತಿಯು 1919 ರಲ್ಲಿ ಪ್ರಾರಂಭವಾಗಿ ಅಂದಿನಿಂದ ಇದನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇಲ್ಲಿಯವರೆಗೆ 20 ಜಾನುವಾರು ಗಣತಿಗಳನ್ನು ನಡೆಸಲಾಗಿದೆ ಮತ್ತು ಹಿಂದಿನ ಗಣತಿಯನ್ನು 2019 ರಲ್ಲಿ ನಡೆಸಲಾಗಿದ್ದು ಈ 21ನೇ ಜಾನುವಾರು ಗಣತಿಯನ್ನು ಡಿಸೆಂಬರ್ 2024 ರ ವರೆಗೆ ನಡೆಸಲಾಗುವದು ಎಂದು ಧಾರವಾಡ ಪಶು ಇಲಾಖೆ ಜಂಟಿ ನಿರ್ದೇಶಕರಾದ ಡಾ. ಪರಮೇಶ್ವರ ನಾಯ್ಕ ಹೇಳಿದರು.
ತಾಲ್ಲೂಕಾ ಪಂಚಾಯತಿ ಸಬಾಭವನದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ತಾಲೂಕಾ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 21ನೇ ಜಾನುವಾರು ಗಣತಿಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಾನುವಾರು ಗಣತಿಯು ದೇಶಾದ್ಯಂತ ಜಾನುವಾರು ಸಂಖ್ಯೆಯ ಸಮಗ್ರ ದತ್ತಾಂಶವನ್ನು ಸಂಗ್ರಹಿಸಲು ಬಹುಮುಖಿಯಾಗಿದ್ದು ಅದರೊಂದಿಗೆ ಜಾನುವಾರು ವಲಯವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಈ ಕಾರ್ಯಕ್ರಮ ಯೋಜನೆಯ ನೀತಿ ನಿರೂಪಣೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಗುರಿ ಈ ಜಾನುವಾರು ಗಣತಿಯ ಉದ್ದೇಶವಾಗಿದೆ ಎಂದರು.
ನವಲಗುಂದ ಪಶು ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ. ಮನೋಹರ ದ್ಯಾಬೇರಿ ಮಾತನಾಡಿ ವಿವಿಧ ಜಾನುವಾರು ಜಾತಿಗಳ ಜನಸಂಖ್ಯೆ, ಅವುಗಳ ತಳಿ, ವಯಸ್ಸು ಮತ್ತು ಲಿಂಗ ಸಂಯೋಜನೆಯನ್ನು ಒಳಗೊಂಡಂತೆ ವಿವರವಾದ ಡೇಟಾವನ್ನು ಸಂಗ್ರಹಿಸುವುದು 21 ನೇ ಜಾನುವಾರು ಗಣತಿಯ ಪ್ರಾಥಮಿಕ ಉದ್ದೇಶವಾಗಿದೆ. ಈ ಜಾನುವಾರು ಗಣತಿಯಲ್ಲಿ ಹದಿನಾರು ಜಾತಿಯ ಪ್ರಾಣಿಗಳಾದ ದನ, ಎಮ್ಮೆ, ಯಾಕ್, ಕುರಿ, ಮೇಕೆ, ಹಂದಿ, ಕುದುರೆ, ಸಣ್ಣಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ ಮತ್ತು ಆನೆ, ಕುಕ್ಕುಟಗಳಾದ ಕೋಳಿ, ಬಾತುಕೋಳಿ, ಟರ್ಕಿ ಮತ್ತು ಇತರೆ ಕುಕ್ಕುಟಗಳಾದ ಎಮು ಮುಂತಾದ ಕೋಳಿ ಪಕ್ಷಿಗಳು, ಕ್ವಿಲ್, ಗಿನಿ ಕೋಳಿ, ಆಸ್ಟ್ರಿಚ್ ಮತ್ತು ಹೆಬ್ಬಾತುಗಳನ್ನು ಇರುವ ಸ್ಥಳಕ್ಕೆ ಭೇಟಿ ನೀಡಿ ಎಣಿಕೆ ಮೂಲಕ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರತಿ ವಾರ್ಡನ್ನು ಗುರುತಿಸಿ ಜಾನುವಾರು ಗಣತಿ ಮಾಡಲಾಗುತ್ತದೆ ಎಂದರು
ನಂತರ ತರಬೇತಿದಾರ ಡಾ ಉಮೇಶ ತಿರ್ಲಾಪುರ ಅವರು ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ ಪಶು ಸಖಿಯರಿಗೆ 21 ನೇ ಜಾನುವಾರು ಗಣತಿಯ ತರಬೇತಿ ನೀಡಿದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಎಚ್ ಬಿ ಸವಣೂರರವರು ಜಾನುವಾರು ಗಣತಿ ಕುರಿತು ಪ್ರಾಸ್ತವಿಕವಾಗಿ ನುಡಿದರು
ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ನವಲಗುಂದ, ಅಣ್ಣಿಗೇರಿ ತಾಲ್ಲೂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ತಾಲ್ಲೂಕಿನ ಎಲ್ಲ ಪಶು ಸಖಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಶ್ರೀಕಾಂತ ಕಲ್ಬುರ್ಗಿ ಸ್ವಾಗತಿಸುದರು,ಗೀತಾ ಬಂಡಿ ವಂದಿಸಿದರು, ಡಾ. ಬಸವರಾಜ ಕರೇಭರಮಣ್ಣವರ ಕಾರ್ಯಕ್ರಮ ನಿರೂಪಿಸಿದರು, ಪಶುಸಖಿ ಗೀತಾ ಕಮ್ಮಾರ ಪ್ರಾರ್ಥಿಸಿದರು.