ಉಡುಪಿ: ಯಮ ಧರ್ಮ ಹಾಗೂ ಚಿತ್ರಗುಪ್ತನಿಂದ ಹೊಂಡದ ವ್ಯಾಸ ಅಳತೆ!
ಉಡುಪಿ: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟು ವಿನೋದಾವಳಿಯನ್ನು ಪ್ರದರ್ಶಿಸುವ ವೇಷಧಾರಿಗಳು ವಿಶೇಷ ಆಕರ್ಷಣೆ ಆಗಿದ್ದು, ಈ ಬಾರಿಯು ಗಮನ ಸೆಳೆಯುವ ವೇಷಗಳು ಕಂಡುಬಂದವು.
ಸಂಪೂರ್ಣ ಹೊಂಡಮಯವಾದ ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮ ಧರ್ಮ, ಚಿತ್ರ ಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆದರು. ಪ್ರೇತಾತ್ಮದ ವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮ ಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನ ದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು. ಈ ವೇಷಧಾರಿಗಳ ವಿಶಿಷ್ಟ ರೀತಿಯ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ರಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದಿ ಉಡುಪಿಯ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದೆ. ಅಪಾಯಕಾರಿ ಎನಿಸಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ವೇಷಧಾರಿಗಳು ವಿಶಿಷ್ಟ ರೀತಿಯ ಪ್ರದರ್ಶನ ನೀಡಿದರು.
ಅದೇ ರೀತಿ ನಟ ಫಹಾದ್ ಫಾಸಿಲ್ ನಟಿಸಿರುವ ಆವೇಶಂ ಸಿನೆಮಾದ ರಂಗಣ್ಣ ಪಾತ್ರ ಧಾರಿಯ ವೇಷ ಉಡುಪಿ ರಥಬೀದಿಯಲ್ಲಿ ಎಲ್ಲರ ಗಮನ ಸೆಳೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬನ್ನಂಜೆಯ ವಿಸ್ಮಯ ತಂಡದ ಸದಸ್ಯರೊಬ್ಬರು ಫಹಾದ್ ಫಾಸಿಲ್(ರಂಗಣ್ಣ) ವೇಷವನ್ನು ತೊಟ್ಟಿದ್ದು, ಜ್ಯೂನಿಯರ್ ಫಹಾದ್ ಫಾಸಿಲ್‌ರಂತೆ ಕಂಡುಬರುತ್ತಿದ್ದರು. ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟು, ಕುತ್ತಿಗೆಯಲ್ಲಿ ಚಿನ್ನಾಭರಣ ಧರಿಸಿ ರೌಡಿ ರಂಗಣ್ಣ ವೇಷ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅಲ್ಲದೇ ರವಿ ಕಟಪಾಡಿಯ ಅವತಾರ -೨ ವೇಷ, ಗೋರಿಲ್ಲಾ ವೇಷ ಹೀಗೆ ನಾನಾ ಬಗೆಯ ವೇಷಗಳು ಆಕಷಣೀಯವಾಗಿತ್ತು. ಹುಲಿ ವೇಷಗಳ ಅಬ್ಬರ ನಗರದಲ್ಲಿ ಜೋರಾಗಿ ಕಂಡುಬಂತು. ಎಲ್ಲೆಡೆ ಕೃಷ್ಣ ವೇಷಧಾರಿಗಳು ಕೂಡ ಕಂಡುಬಂದರು.