ಕಡಬ – ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – ಎಂಜಿನಿಯರ್, ಮುಖ್ಯಶಿಕ್ಷಕ ಅಮಾನತು
ಕಡಬ-ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯವಾದ ಘಟನೆ ನಡೆದಿದೆ. ಅದೃಷ್ಟವಶಾತ್ ೧೮೦ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಫೀಲ್ಡ್ ಇಂಜಿನಿಯರ್‌ನನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ವಿದ್ಯಾರ್ಥಿಗಳು ಹೊರಗೆ ಆಟ ಆಡುತ್ತಿರುವಾಗ ಈ ದುರ್ಘಟನೆ ನಡೆದ ಹಿನ್ನಲೆ ಅದೃಷ್ಟವಶಾತ್ ೧೮೦ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫಾತಿಮತ್ ಸುಹಾನ, ರಶ್ಮಿ, ದೀಕ್ಷೀತಾ ಹಾಗೂ ಯಶ್ಮಿತಾ ಎಂಬವವರಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ದೌಡಾಯಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ, ಫೀಲ್ಡ್ ಇಂಜಿನಿಯರ್ ಅಮಾನತುಗೊಳಿಸಿ ಡಿಸಿ ಆದೇಶ
ಈ ಘಟನೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಕುಂತೂರು ಹಾಗೂ ಫೀಲ್ಡ್ ಇಂಜಿನಿಯರ್‌ನನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ವಿಪತ್ತು ಪರಿಹಾರ ನಿಧಿಯಲ್ಲಿ ಶಾಲೆ ರಿಪೇರಿಗೆ ಹಣ ಬಂದಿತ್ತು. ಈ ಹಿನ್ನಲೆ ಶಾಲೆಯಲ್ಲಿ ಮಕ್ಕಳನ್ನಿರಿಸಿಕೊಂಡು ರಿಪೇರಿ ಕಾರ್ಯ ಮಾಡುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.