ಜಾನಪದ ಉಳಿವಿಗೆ ಸಂಕಲ್ಪ ಮಾಡಬೇಕು: ಹಿ.ಚಿ.ಬೋರಲಿಂಗಯ್ಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.28: ಜಾನಪದ ನಮ್ಮ ಬದುಕಿನ ಜೀವ ಗಂಗೆ, ಜಾನಪದ ಕಲೆಗಳ ಉಳಿವಿಗೆ ಯುವಜನರು ಸಂಕಲ್ಪ ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹಿ.ಚಿ.ಬೋರಲಿಂಗಯ್ಯ ಕರೆ ನೀಡಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, ಜಾನಪದ ಗಾಯನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಾನಪದ ನಮ್ಮ ಜೀವನದ ವಾಸ್ತವತೆ ಹಾಗೂ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಜೀವಗಂಗೆಯಾಗಿದ್ದು, ಜಾನಪದ ಕಲೆಗಳು ಸೇರಿದಂತೆ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ರಾಜ್ಯದಲ್ಲಿಯೇ ಅತೀ ಹೆಚ್ಚು ಜಾನಪದ ಕಲಾ ಪ್ರಾಕಾರಗಳ ವೈವಿಧ್ಯತೆಯು ಉಳಿದು ಬೆಳೆದು ಜೀವಂತವಾಗಿರುವುದು ಮಂಡ್ಯ ಜಿಲ್ಲೆಯಲ್ಲಿ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ರಾಮನಗರದ ಬಳಿ ಜಾನಪದ ಲೋಕವನ್ನು ಸ್ಥಾಪಿಸಿ ಜಾನಪದ ಕಲೆಗಳ ಉಳಿವು ಹಾಗೂ ಸಂರಕ್ಷಣೆಗೆ ಪಣ ತೊಟ್ಟವರು ಡಾ. ಹೆಚ್.ಎಲ್.ನಾಗೇಗೌಡರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನವರಾಗಿದ್ದಾರೆ. ನಮ್ಮ ಸಂಸ್ಕೃತಿ ಹಾಗೂ ಜೀವನದ ಮೌಲ್ಯಗಳ ಸಂಸ್ಕೃತಿಯು ಅನಾವರಣಗೊಳ್ಳುವುದು ಜಾನಪದ ಕಲೆಗಳ ಮೂಲಕವಾದ್ದರಿಂದ ಮೌಡ್ಯಗಳಿಲ್ಲದ ನಮ್ಮ ನಾಗರೀಕ ಸಮಾಜದ ವೈವಿಧ್ಯತೆ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ಜಾನಪದ ಕಲೆಗಳ ಉಳಿವಿಗೆ ಧೀಕ್ಷೆ ತೊಡಬೇಕು ಎಂದು ಹಿ.ಚಿ.ಬೋರಲಿಂಗಯ್ಯ ಕರೆ ನೀಡಿದರು.
ಜಾನಪದ ನಿಘಂಟು ಅನುವಾದಕ ಕ್ಯಾತನಹಳ್ಳಿ ಚಂದ್ರಣ್ಣ ವಿಶ್ವ ಜಾನಪದ ಸಾಹಿತ್ಯ ಕುರಿತು ವಿಚಾರ ಮಂಡಿಸಿ ವಿಶ್ವದಲ್ಲಿಯೇ ಶ್ರೇಷ್ಠ ಜಾನಪದ ವೈವಿಧ್ಯತೆಯಿರುವುದು ಕರ್ನಾಟಕ ರಾಜ್ಯದಲ್ಲಿ ಜಾನಪದ ನಮ್ಮ ಬದುಕಿನ ಜೀವ ಸೆಲೆಯಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ, ಸ್ನೇಹ, ವಿಶ್ವಾಸ ಹಾಗೂ ಸಹ ಬಾಳ್ವೆಯ ಸಮೃದ್ಧ ಜೀವನಕ್ಕೆ ದಾರಿದೀಪವಾಗಿದೆ ಎಂದರು.
ಶಾಸಕ ಹೆಚ್.ಟಿ. ಮಂಜು ಮಾತನಾಡಿ ಜಾನಪದ ನಮ್ಮ ಸಾಹಿತ್ಯದ ಮೂಲ ಬೇರಾಗಿದ್ದು ಜಾನಪದ ಸಂಸ್ಕೃತಿಯು ವಿಶ್ವದಲ್ಲಿಯೇ ಸರ್ವ ಶ್ರೇಷ್ಠ ಸಂಸ್ಕೃತಿಯಾಗಿದೆ. ಜಾನಪದ ಸಾಹಿತ್ಯದ ಮುಂಗೋಳಿ ಎಂದು ಹೆಸರಾದ ಅರ್ಚಕ ರಂಗಸ್ವಾಮಿ ಭಟ್ಟರು ನಮ್ಮ ಕೆ.ಆರ್.ಪೇಟೆ ತಾಲೂಕಿನವರು. ಬಂಡಿಹೊಳೆಯ ಜಾನಪದ ವಿದ್ವಾಂಸ ಅರ್ಚಕ ರಂಗಸ್ವಾಮಿ ಭಟ್ಟರು ಸೇರಿದಂತೆ ಹಲವಾರು ಮಹನೀಯರು ಜಾನಪದ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜಾನಪದ ನಮ್ಮ ಬದುಕಿನ ಉಸಿರಾಗಿದ್ದು ಜಾನಪದ ಕಲೆಗಳನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಜಾನಪದ ಕಲೆಗಳ ಸಂರಕ್ಷಣೆಗೆ ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಒಂದಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಂಜೇಶ್ ಚನ್ನಾಪುರ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ ಸ್ವಾಮಿ ಮತ್ತು ತಾಲೂಕು ಘಟಕದ ಅಧ್ಯಕ್ಷ ಕತ್ತರಘಟ್ಟ ವಾಸು ರವರನ್ನು ಕಾಲೇಜಿನ ವತಿಯಿಂದ ಪ್ರಾಂಶುಪಾಲರಾದ ಪೆÇ್ರಫೆಸರ್ ಹೆಚ್.ಎಂ.ಹೇಮಲತಾ ಗೌರವಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಪ್ರಾಧ್ಯಾಪಕರುಗಳಾದ ಡಾ. ಸಿ.ರಮೇಶ, ಜಯಕೀರ್ತಿ, ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಅತ್ತಿಗುಪ್ಪೆ ಸಾಹಿತ್ಯ ಬಳಗದ ಮಾರೇನಹಳ್ಳಿ ಲೋಕೇಶ್, ಪಾಂಡುಪುರ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹಾರೋಹಳ್ಳಿ ಧನ್ಯ ಕುಮಾರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸೋಮಶೇಖರ್, ತಾಲೂಕು ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಶೀಳನೆರೆ ಶಿವಕುಮಾರ್, ಲೇಪಾಕ್ಷಿ ಗೌಡ, ಕನ್ನಡ ನಾಗರಾಜು ಮತ್ತಿತರರು ಹಾಜರಿದ್ದರು.