ಭೂಮಿ ಕಿತ್ತುಕೊಳ್ಳುವ ಕಾಯ್ದೆ ರದ್ದಾಗಲಿ
ಸಂಜೆವಾಣಿ ನ್ಯೂಸ್
ಮೈಸೂರು, ಆ.28:- ರೈತರ ಕೃಷಿ ಭೂಮಿ, ಸಾಲ ವಸೂಲಾತಿ ನೆಪದಲ್ಲಿ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ರದ್ದಾಗಬೇಕೆಂದು ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದರು.
ತಮಿಳುನಾಡಿನ ತಿರುಚಿಯಲ್ಲಿ ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಕೃಷಿ ಭೂಮಿ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಸಾಲ ವಸೂಲಾತಿಗಾಗಿ ಸರ್ಫೈಸಿ ಕಾಯಿದೆ ಜಾರಿಗೆ ತಂದು ಸಾಲ ಕಟ್ಟದ ರೈತರ ಜಮೀನು ಬ್ಯಾಂಕುಗಳು ವಶ ಪಡಿಸಿಕೊಳ್ಳುತ್ತಿವೆ. ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ. ಮುಂದಿನ ಅಕ್ಟೋಬರ್‍ನಲ್ಲಿ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ದೇಶದ ರೈತ ಮುಖಂಡರೆಲ್ಲ ಸೇರಿ ಪಣತೊಡಬೇಕಾಗಿದೆ ಎಂದು ತಿಳಿಸಿದರು.
ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ್, ತೆಲಂಗಾಣ, ಕೇರಳ ರಾಜ್ಯಗಳ ಸಹಸ್ರಾರು ರೈತರು ಭಾಗವಹಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ, ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇತ್ಯಾದಿ ಒತ್ತಾಯಗಳ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಮುಂದಿನ ದಿನಗಳಲ್ಲಿ ಪ್ರಬಲಗೊಳಿಸಲು ಎಲ್ಲಾ ರಾಜ್ಯಗಳ ರೈತ ಮುಖಂಡರು ತೀರ್ಮಾನಿಸಿದರು.
ಕೆ.ವಿ.ಬಿಜು, ತೆಲಂಗಾಣದ ವೆಂಕಟೇಶ್ವರರಾವ್, ರಾಮನಗೌಂಡರ್, ಜಗಜಿತ್ ಸಿಂಗ್ ದಲೆವಾಲಾ, ತಮಿಳುನಾಡಿನ ಸಂಚಾಲಕ ಪಿ.ಆರ್.ಪಾಂಡ್ಯನ್ ಸೇರಿದಂತೆ ಹಲವರು ಇದ್ದರು.