ಆಶ್ರಮಕ್ಕೆ 1500 ಕೆಜಿ ಅಕ್ಕಿ ಪೂರೈಕೆ
ಸಂಜೆವಾಣಿ ನ್ಯೂಸ್
ಮೈಸೂರು, ಆ.28:- ಹತ್ತು ಹಲವು ಉತ್ತಮ ಸಾಮಾಜಿಕ ಕಾರ್ಯಗಳ ಮೂಲಕ ಬಡವರ, ನೊಂದವರ ಸೇವೆಗೆ ಶ್ರಮಿಸುತ್ತಿರುವ ರೋಟರಿ ಕ್ಲಬ್ ಆಫ್ ಹೇರಿಟೇಜ್ ಮೈಸೂರ್ ವತಿಯಿಂದ ಕರ್ನಾಟಕ ಜನಸೇವಾ ಟ್ರಸ್ಟ್‍ಗೆ ಸುಮಾರು 1500 ಕೆಜಿಯ 60 ಅಕ್ಕಿ ಮೂಟೆಗಳನ್ನು ಪೂರೈಸಲಾಯಿತು. ಟ್ರಸ್ಟ್ ನ ಸಂಸ್ಥಾಪಕರಾದ ಪ್ರಶಾಂತ್ ಚಕ್ರವರ್ತಿ ಅವರ ಮನವಿ ಹಿನ್ನೆಲೆಯಲ್ಲಿ ಆಶ್ರಮದ ನಿವಾಸಿಗಳಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಅಕ್ಕಿಯನ್ನು ತಲುಪಿಸಲಾಯಿತು.
ಈ ವೇಳೆ ರೋಟರಿ ಕ್ಲಬ್ ಆಫ್ ಹೇರಿಟೇಜ್ ಮೈಸೂರ್ ಅಧ್ಯಕ್ಷರಾದ ರಾಜೇಶ್ ಅವರು ಮಾತನಾಡಿ, ನಮ್ಮ ಕ್ಲಬ್ ವತಿಯಿಂದ ಇದುವರೆವಿಗೂ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಅಸಹಾಯಕರಿಗೆ ಅಗತ್ಯ ಇರುವಂತ ಎಲ್ಲಾ ನೆರವುಗಳನ್ನು ನೀಡಲಾಗಿದ್ದು, ಲಾಕ್‍ಡೌನ್‍ನ ಎರಡೂ ಅವಧಿಯಲ್ಲಿ ರೊ.ತಲಕಾಡು ಮಂಜುನಾಥ್ ಮತ್ತು ರೊ. ಸುರೇಂದ್ರ ಪಿ. ಅವರ ಅಧ್ಯಕ್ಷತೆಯಲ್ಲಿ ಸುಮಾರು 1.5 ಲಕ್ಷ ಆಹಾರದ ಪೆÇಟ್ಟಣಗಳನ್ನು ವಿತರಿಸಲಾಗಿತ್ತು. ಅಲ್ಲದೇ ಸಾಕಷ್ಟು ಜನರಿಗೆ ರೇಷನ್ ಕಿಟ್ ಮತ್ತು ಔಷಧಿ ಕಿಟ್‍ಗಳನ್ನು ಕೂಡ ನೀಡಲಾಗಿದೆ.
ಈ ಸಮಯದಲ್ಲಿ ನಮ್ಮ ಕ್ಲಬ್‍ನ ಸಂಸ್ಥಾಪಕ ಅಧ್ಯಕ್ಷರಾದ ರೊ.ಮಂಜುನಾಥ್.ಕೆ ರವರು ಅತಿ ಹೆಚ್ಚು ಸಂಪನ್ಮೂಲ ತರುವಲ್ಲಿ ಮೊದಲಿಗರಾದರು. ಹಾಗೂ ಕ್ಲಬ್‍ನ ಸರ್ವ ಸದಸ್ಯರು ಕೂಡ ಧನ ಸಹಾಯ ಮಾಡಿದ್ದರು ಎಂದು ಸ್ಮರಿಸಿದರಲ್ಲದೇ, ನಮ್ಮ ಕ್ಲಬ್ ವತಿಯಿಂದ ಈಗಾಗಲೇ ಸುಮಾರು 25ಕೆಜಿಯ 100 ಅಕ್ಕಿ ಚೀಲಗಳನ್ನು ಶರಣ್ಯ ಟ್ರಸ್ಟ್ ವೃದ್ಧಾಶ್ರಮ, ಜೀವನಿಧಿ ಟ್ರಸ್ಟ್ ವೃದ್ಧಾಶ್ರಮ, ಅರುಣೋದಯ ವಿಶೇಷ ಚೇತನ ಮಕ್ಕಳ ಶಾಲೆ ಮತ್ತು ನೆಲೆ ಫೌಂಡೇಷನ್ ಸೇರಿ ಹಲವು ಆಶ್ರಮಗಳಿಗೆ ಸರ್ವ ಸದಸ್ಯರ ಸಹಕಾರದಿಂದ ನೀಡಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು, ಕರ್ನಾಟಕ ಜನಸೇವಾ ಟ್ರಸ್ಟ್‍ನ ಸಂಸ್ಥಾಪಕರಾದ ಪ್ರಶಾಂತ್ ಚಕ್ರವರ್ತಿ ಅವರ ಆಶ್ರಮಕ್ಕೆ ಈ ಹಿಂದೆಯೇ ಭೇಟಿ ನೀಡಿ ಅಲ್ಲಿನ ವಾಸ್ತವಾಂಶ ತಿಳಿದುಕೊಳ್ಳಲಾಗಿತ್ತು. ಅಲ್ಲಿ ಸುಮಾರು 70 ಜನ ನಿರಾಶ್ರಿತರಿಗೆ ಅವರು ಆಶ್ರಯ ಕೊಟ್ಟಿದ್ದಾರಲ್ಲದೇ, ಅಲ್ಲಿ ಪ್ರತಿ ದಿನ 25 ಕೆಜಿ ಅಕ್ಕಿ ಬಳಸುತ್ತಿರುವ ವಿಚಾರ ತಿಳಿದುಕೊಂಡಿದ್ದೆ. ಆದ್ದರಿಂದ ರೈತಾಪಿ ಕುಟುಂಬದವನಾದ ನಾನೇ ನಮ್ಮ ಜಮೀನಿನಲ್ಲಿ ಸ್ವತಃ ಬೆಳೆದ 1500 ಕೆಜಿ ಅಕ್ಕಿ ಪೂರೈಕೆ ಮಾಡುವುದಾಗಿ ಹೇಳಿದ್ದೆ. ಈ ನಡುವೇ ನಾನು ರೋಟರಿ ಕ್ಲಬ್ ಆಫ್ ಹೇರಿಟೇಜ್ ಮೈಸೂರ್ ಅಧ್ಯಕ್ಷನಾಗಿ ಪದವಿಯನ್ನು ಸ್ವೀಕರಿಸಿದಾಗ ನನ್ನ ಸಂಕಲ್ಪ ನಾನು 365 ದಿನ 25ಕೆಜಿ ಅಕ್ಕಿ ಚೀಲಗಳನ್ನು ವಿವಿಧ ಆಶ್ರಮಗಳಿಗೆ ನನ್ನ ಅವಧಿಯಲ್ಲಿ ಕೊಡುವುದಾಗಿ ಘೋಷಿಸಿದ್ದೆ. ಅಂತೆಯೇ ಮೈಸೂರಿನಲ್ಲಿ ನಡೆದ ಪದವಿ ಪ್ರದಾನ,ಪದಗ್ರಹಣ ಸಮಾರಂಭ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪ್ರಶಾಂತ್ ಚಕ್ರವರ್ತಿಯವರನ್ನು ಬರಮಾಡಿಕೊಂಡು ಅವರಿಗೆ 60 ಚೀಲ 25ಕೆಜಿ ಅಕ್ಕಿ ಬ್ಯಾಗ್‍ಗಳನ್ನು ಕೊಡುವುದಾಗಿ ಭರವಸೆ ನೀಡಿ, ಅಕ್ಕಿಯನ್ನು ಕೂಡ ತಲುಪಿಸಲಾಗಿತ್ತು. ಆದರೆ ನಾವು ಅವರ ಆಶ್ರಮಕ್ಕೆ ಮತ್ತೊಮ್ಮೆ ಬರುವವರೆಗೂ ಅಕ್ಕಿಯನ್ನು ಬಳಸುವುದಿಲ್ಲ ಎಂದು ಪ್ರಶಾಂತ್ ಹೇಳಿದ್ದರು. ಅದಕ್ಕಾಗಿ ನಮ್ಮ ರೋಟರಿ ಕ್ಲಬ್ ಆಫ್ ಹೇರಿಟೇಜ್ ಮೈಸೂರು ವತಿಯಿಂದ ಸದಸ್ಯರುಗಳ ಜೊತೆಗೂಡಿ ಆಶ್ರಮಕ್ಕೆ ಭೇಟಿ ನೀಡಿ ನಿರಾಶ್ರಿತರೊಂದಿಗೆ ಕಾಲ ಕಳೆದು ಅವರ ಕುಶಲೋಪರಿ ವಿಚಾರಿಸಿ, ಅಕ್ಕಿಯನ್ನು ಬಳಸುವಂತೆ ಮನವಿ ಮಾಡಿದೇವು ಎಂದರು.
ಪ್ರಶಾಂತ್ ಚಕ್ರವರ್ತಿ ಅವರು ಮಾತನಾಡಿ, ರೋಟರಿ ಕ್ಲಬ್ ಆಫ್ ಹೇರಿಟೇಜ್ ಮೈಸೂರ್‍ನ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರಲ್ಲದೇ, ಕನಿಷ್ಠ 2 ತಿಂಗಳಿಗಾಗುವಷ್ಟು ಅಕ್ಕಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೇ, ಇತರೆ ದಾನಿಗಳು ಕೂಡಾ ತಮ್ಮಿಂದಾಗುವ ಸಹಾಯವನ್ನು ಮಾಡುವ ಮೂಲಕ ಆಶ್ರಮದಲ್ಲಿನ ನಿವಾಸಿಗಳಿಗೆ ನೆರವಾಗಬೇಕೆಂದು ಕೋರಿದರು.
ಈ ವೇಳೆ ಕ್ಲಬ್‍ನ ಮಾಜಿ ಅಧ್ಯಕ್ಷ ರೋ.ಸುರೇಶ್ ಜಿ.ಎಂ, ಕಾರ್ಯದರ್ಶಿ ರೋ.ಗೋಪಾಲಕೃಷ್ಣ, ರೋ. ಗಿರೀಶ್,ಕ್ಲಬ್ ನ ಸರ್ವೀಸ್ ನಿರ್ದೇಶಕರಾದ ರೋ.ಮಿಂಚು ಇನ್ನಿತರರು ಉಪಸ್ಥಿತರಿದ್ದರು.