ಕನ್ನಡತನ ಬದುಕಾಗಲಿ: ಚೂಡಾರತ್ನಮ್ಮ
ಸಂಜೆವಾಣಿ ನ್ಯೂಸ್
ಮೈಸೂರು, ಆ.28:- ಚಿತ್ಕಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಎಸ್.ಜಿ.ಎಂ ಟೂರ್ಸ್ ಸಹಯೋಗದೊಂದಿಗೆ ತನ್ನ ವಾರ್ಷಿಕೋತ್ಸವನ್ನು ಶಂಕರ ಮಠದ ರಸ್ತೆಯಲ್ಲಿರುವ ಅರಮನೆ ಜಪದಕಟ್ಟೆ ಮಠದಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ನಾಡಿನ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಹಲವಾರು ಕವಿಗಳು ತಮ್ಮ ಕಾವ್ಯವಾಚನ, ಹಾಡಿನ ಮೂಲಕ ನೆರೆದಿದ್ದ ಎಲ್ಲರನ್ನೂ ರಂಜಿಸಿದರು. ಮುಖ್ಯ ಅತಿಥಿಗಳಾಗಿದ್ದ ದಕ್ಷಿಣಾ ಮೂರ್ತಿ ಕೃಷ್ಣಕುಮಾರ್ ರವರು ಚಿತ್ಕಲ ಪ್ರತಿಷ್ಠಾನದ ಸಂಸ್ಥಾಪಕರಿಗೆ, ಎಲ್ಲಾ ಗಣ್ಯರಿಗೆ ಹಾಗೂ ಇಡೀ ತಂಡಕ್ಕೆ ಶುಭಾಶಯವನ್ನು ಕೋರಿ, ತಂದೆ-ತಾಯಿಯ ಋಣ ಎಂಬ ಶೀರ್ಷಿಕೆಯಡಿ ಕವನ ವಾಚಿಸಿ ಮಾತಾಪಿತೃಗಳ ಸೇವೆಯ ಮಹತ್ವವನ್ನು ತಿಳಿಸಿದರು.
ಚೂಡಾರತ್ನಮ್ಮ ಮಾತನಾಡಿ, ಇದೇ ರೀತಿ ಕನ್ನಡವನ್ನು ಕಟ್ಟುವ ಕೆಲಸ ಮುಂದಿನ ದಿನಗಳಲ್ಲೂ ನಿರಾತಂಕವಾಗಿ ಸಾಗಲಿ, ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಮೊದಲಿಗೆ ನಾವೆಲ್ಲರೂ ಅದನ್ನು ನಿತ್ಯ ಜೀವನದಲ್ಲಿ ಹೆಚ್ಚಾಗಿ ಬಳಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕವನ ವಾಚಿಸಿದ ಎಲ್ಲ ಕವಿಗಳಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ರೂಪದರ್ಶಿನಿ, ಡೇವಿಡ್ ಪ್ರತಿಭಾಂಜಲಿ, ಸಂಪದ ಸಾಲು ಪತ್ರಿಕೆಯ ವೆಂಕಟೇಶ್ ಸಂಪಾ ಮಾತನಾಡಿ, ಹೆತ್ತ ತಾಯಿಯನ್ನು ತಂದೆ ಕೊಡಿಸಿದ ಸ್ಕೂಟರ್‍ನಲ್ಲಿ ಹೊತ್ತು ನಾಲ್ಕಾರು ರಾಜ್ಯಗಳ ತೀರ್ಥ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿರುವ ಇಂಥ ಮಹಾನ್ ಮಾತೃಸಿದ್ಧಿ ಸಾಧಕರ ಜತೆ ವೇದಿಕೆಯಲ್ಲಿರುವುದೇ ನಮ್ಮ ಪಾಲಿನ ಸೌಭಾಗ್ಯ ಎಂದರು.
ಕವಿಗೋಷ್ಠಿಯ ತೀರ್ಪುಗಾರರಾಗಿ ಉಷಾ ನರಸಿಂಹನ್ ಹಾಗೂ ಮೀನಾಕ್ಷಿ ಪಾಲ್ಗೊಂಡಿದ್ದರು.