ಒಳ ಮೀಸಲಾತಿ ಆದೇಶವನ್ನು ಶೀಘ್ರದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಬೇಕು : ಯಡತೋರೆ ನಿಂಗರಾಜ್
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ. ಆ.28:– ಮುಖ್ಯ ಮಂತ್ರಿ ಸಿದ್ದರಾಮಯ್ಯರವರಿಗೆ ರಾಜ್ಯ ಆದಿ ಜಂಬವ ಸಂಘಟನೆ ನೈತಿಕ ಬೆಂಬಲ ನೀಡುತ್ತಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಜಾರಿಗೊಳಿಸಬೇಕು ಎಂದು ರಾಜ್ಯ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘಟನೆ ಮೈಸೂರು ಜಿಲ್ಲಾ ವಿಭಾಗೀಯ ಅಧ್ಯಕ್ಷ ಯಡತೋರೆ ನಿಂಗರಾಜ್ ಒತ್ತಾಯಿಸಿದರು.
ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟಿನ ಏಳು ಸದಸ್ಯರ ಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿಯನ್ನು ನೀಡುವಂತ್ತೆ ಐತಿಹಾಸಿಕ ತೀರ್ಪನ್ನು ನೀಡಿದೆ.ಈ ಆದೇಶದಂತ್ತೆ ಆಯಾಯ ರಾಜ್ಯ ಸರ್ಕಾರವೇ ಮೀಸಲಾತಿ ವರ್ಗಿಕರಣ ಮಾಡುವ ಹಕ್ಕನ್ನು ನೀಡಿದೆ.80 ದಶಕಗಳ ಹೋರಾಟದ ಫಲ ಇದಾಗಿದ್ದು ನೂರಾರು ಜಾತಿಗಳಿಗೆ ಇದರಿಂದ್ದ ಸಾಮಾಜಿಕ ನ್ಯಾಯ ದೊರೆಯುತ್ತದೆ. ಸಾಕಷ್ಟು ಸಮುದಾಯಗಳು ಇಂದಿಗೂ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಬಗ್ಗೆ ಸಾಕಷ್ಟು ಆಯೋಗಗಳು ಅಧ್ಯಯನ ಮಾಡಿ ವರದಿಗಳನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಗಳಿಗೆ ನೀಡಿದ್ದಾರೆ. ಆದ್ದರಿಂದ್ದ ರಾಜ್ಯ ಸರ್ಕಾರ ಅತೀ ಶೀಘ್ರದಲ್ಲೇ ಒಳಮಿಸಲಾತಿ ಜಾರಿಗೊಳಿಸಬೇಕಾಗಿ ಅಗ್ರಹಿಸಿದರು.
ಸಂಘದ ಹಿರಿಯ ಮುಖಂಡ ಹುಣಸೂರು ಡಿ.ಕುಮಾರ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಾಕಷ್ಟು ಮಹತ್ವ ಪೂರ್ಣವಾದ ಯೋಜನೆಗಳನ್ನು ಜಾರಿಗೊಳಿಸಿ ನೊಂದವರ ಧ್ವನಿಯಾಗಿದ್ದಾರೆ. ಇವರು ಕೂಡ ಒಳ ಮೀಸಲಾತಿಯ ವರ್ಗೀಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡಿದ್ದರು.ರಾಜ್ಯ ಸರ್ಕಾರ ಅತೀ ಶೀಘ್ರದಲ್ಲೇ ಮೀಸಲಾತಿ ವರ್ಗಿಕರಣ ಮಾಡಿ ನೈಜ ಸಮಾನತೆಯನ್ನು ಕಾಪಾಡಬೇಕು ಮತ್ತು ಡಿ.ದೇವರಾಜ ಅರಸು ರವರ ಆದರ್ಶಗಳನ್ನು ಹೊಂದಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ಬೆಂಬಲಕ್ಕೆ ನಮ್ಮ ಸಮುದಾಯವಿದೆ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಸಿಗೂರು ವಿಜಯ್ ಕುಮಾರ್ ಮಾತನಾಡಿ ಮಾದಿಗ ಸಮುದಾಯವು ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೇಸ್ ಪಕ್ಷವನ್ನು ಬೇಬಲಿಸುತ್ತ ಬಂದಿದೆ. ಇಂದು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದ್ದೆ ಆದ್ದರಿಂದ್ದ ಒಳ ಮೀಸಲಾತಿ ಜಾರಿಗೊಳಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ರವಿ,ಕಾರ್ಯದರ್ಶಿ ರಮೇಶ್ ಮರದೂರು,ಉಪಾಧ್ಯಕ್ಷ ಕುಮಾರ್,ಖಜಾಂಚಿ ಜಯ ಸ್ವಾಮಿ ಹಾರನಹಳ್ಳಿ, ಮುಖಂಡರಾದ ನಾರಾಯಣ,ಮಾದೇವ,ಸೌರಭ,ಆರ್.ಡಿ.ಚಂದ್ರು, ಬಸವಯ್ಯಾ ಹಾಜರಿದ್ದರು.