ಭೂವರಹನಾಥ ಕ್ಷೇತ್ರಕ್ಕೆ ಸಿ.ಹೆಚ್.ವಿಜಯಶಂಕರ್ ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.28: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಭೂವರಾಹನಾಥ ಕಲ್ಲಹಳ್ಳಿಗೆ ಮೇಘಾಲಯ ರಾಜ್ಯಪಾಲ ಸಿ.ಹೆಚ್. ವಿಜಯಶಂಕರ್ ಭೇಟಿ ನೀಡಿ ಭೂ ವರಾಹನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬ ಸಮೇತ ಭೂ ವರಹನಾಥ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಅವರನ್ನು ದೇವಾಲಯ ವ್ಯವಸ್ಥಾಪನ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ದೇವಾಲಯ ಪ್ರದಕ್ಷಿಣೆ ಮಾಡಿದ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು.
ಭೂ ವರಹನಾಥ ಕ್ಷೇತ್ರವು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಭೂ ವೈಕುಂಠವೆಂದೇ ಪ್ರಖ್ಯಾತಿ ಗಳಿಸಿರುವ ಕ್ಷೇತ್ರದ ಮಣ್ಣಿಗೆ ವಿಶೇಷ ಶಕ್ತಿಯಿದೆ. ಕಳೆದ ಆರು ತಿಂಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕ್ಷೇತ್ರಕ್ಕೆ ಬಂದು ಸ್ವಾಮಿಯ ಶಿಲಾ ಮೂರ್ತಿಗೆ ಪೂಜೆ ಸಲ್ಲಿಸಿ ಹೋಗಿದ್ದೆ. ಭೂ ವರಹನಾಥ ಸ್ವಾಮಿಯ ಕೃಪೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋಧಿ ಅವರ ಆಶೀರ್ವಾದದ ಬಲದಿಂದ ಇಂದು ರಾಜ್ಯಪಾಲ ಹುದ್ದೆಗೇರಿದ್ದೇನೆ. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತೋಷ ತಂದಿದೆಯಲ್ಲದೆ, ಸಂತೃಪಿಯ ಮನೋಭಾವನೆ ಮೂಡಿದೆ ಎಂದು ರಾಜ್ಯಪಾಲ ವಿಜಯಶಂಕರ್ ಹೇಳಿದರು.
ಮೇಘಾಲಯ ರಾಜ್ಯವು ಪ್ರವಾಸಿ ತಾಣವಾಗಿದ್ದು, ವಿಶೇಷ ಔಷಧಿಯ ಸಸ್ಯಗಳು ಹಾಗೂ ಗಿಡಮೂಲಿಕೆಗಳನ್ನು ಹೊಂದಿರುವ ರಾಜ್ಯವಾಗಿದ್ದು ಕಾಡು ಹಾಗೂ ಬುಡಕಟ್ಟು ಜನರೇ ಹೆಚ್ಚಾಗಿ ವಾಸವಾಗಿರುವ ಈ ರಾಜ್ಯದ ಸಂಸ್ಕೃತಿಯೇ ವಿಶೇಷ. ಸಂವಿಧಾನದ ಅಡಿಯಲ್ಲಿ ಬದ್ಧತೆಯಿಂದ ಕೆಲಸ ಮಾಡಿ ಮೈಸೂರಿನ ಕೀರ್ತಿಯನ್ನು ರಾಷ್ಟ್ರಾದ್ಯಂತ ಬೆಳಗಲು ಸಂಕಲ್ಪ ಮಾಡಿದ್ದೇನೆ ಎಂದು ವಿಜಯಶಂಕರ್ ಹೇಳಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲ ವಿಜಯಶಂಕರ್ ಅವರನ್ನು ರಾಜ್ಯದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಮ್ಮ ಬೆಂಬಲಿಗರೊಂದಿಗೆ ಹಾಜರಿದ್ದು ಸ್ವಾಗತಿಸಿದರು. ದೇವಾಲಯ ವ್ಯವಸ್ಥಾಪನ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್, ತಹಸೀಲ್ದಾರ್ ಆದರ್ಶ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್, ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಜರಿದ್ದರು.
ನಾಗಮಂಗಲ ಡಿವೈಎಸ್‍ಪಿ ಡಾ. ಸುಮೀತ್, ಇನ್ಸ್ಪೆಕ್ಟರ್ ಆನಂದೇಗೌಡ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದ್ದರು.