ಕಾಂಗ್ರೆಸ್ ಬಲವರ್ಧನೆಗೆ ಇನ್ನೂ ಹೆಚ್ಚಿನ ಒತ್ತು ನೀಡಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.28-ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರು ಸಹ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇನ್ನು ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಮೂಲಕ ಮತ್ತಷ್ಟು ಬಲವರ್ಧನೆಯನ್ನು ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮೈಸೂರು ವಿಭಾಗದ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಉಪ ಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಸತ್ಯ ಶೋಧನಾ ಸಮಿತಿ ಪರಿಶೀಲನಾ ತಂಡದ ನೇತೃತ್ವ ವಹಿಸಿ ಮಾತನಾಡಿದ ಅವರು, ಮಾಜಿ ಸಚಿವ ದಿ. ಎಚ್.ಎಸ್. ಮಹದೇವಪ್ರಸಾದ್, ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ್ ಅವರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷವನ್ನು ಸಧೃಢವಾಗಿ ಕಟ್ಟುವ ಜೊತೆಗೆ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ಹಾಕಿದ ಭದ್ರಬುನಾದಿಯಲ್ಲಿ ಜಿಲ್ಲೆಯ ಶಾಸಕರು ಹಾಗು ಸಚಿವರು, ಸಂಸದರು ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷವವನ್ನು ಬಲವರ್ಧನೆ ಮಾಡಬೇಕು. ಎರಡನೇ ಹಂತದ ಮುಖಂಡರು ಹಾಗು ಕಾರ್ಯಕರ್ತರನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಬೇಕು ಎಂದರು.
ಚಾಮರಾಜನಗರ ಲೋಸಕಭಾ ಕ್ಷೇತ್ರದ ಚುನಾವಣೆಯ ಗೆಲುವು ಇತರೇ ಜಿಲ್ಲೆಗಳು ಹಾಗೂ ಕ್ಷೇತ್ರಗಳಿಗೆ ಮಾದರಿಯಾಗಿದೆ. ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸುವ ಮೂಲಕ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದೀರಿ. ಈ ಗೆಲುವು ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಅನುಸರಿಸಿ ಕ್ರಮಗಳು ಮತ್ತು ಕಾರ್ಯ ವಿಧಾನಗಳನ್ನು ಹಂಚಿಕೊಳ್ಳಬೇಕು. ಇತರೇ ಕ್ಷೇತ್ರಗಳಿಗೂ ಇದನ್ನು ಅನ್ವಯಿಸಿದರೆ ಗೆಲುವು ಸಾಧ್ಯವಾಗುತ್ತದೆ. 10 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಅಧಿಕಾರವನ್ನು ನೀಡುವ ಮೂಲಕ ಹೊಸಬರಿಗೆ ಬ್ಲಾಕ್ ಅಧ್ಯಕ್ಷ ಸ್ಥಾನವನ್ನು ನೀಡಲು ಕೆಪಿಸಿಸಿ ಚಿಂತನೆ ಮಾಡಿದೆ. ಇಂಥವರ ಪಟ್ಟಿಯನ್ನು ನೀಡಬೇಕು. ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದ್ದು, ಯುವಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂದು ಸುದರ್ಶನ ತಿಳಿಸಿದರು.
ಪಕ್ಷದ ಮೊದಲ, ನಂತರ ವ್ಯಕ್ತಿ, ಇತರೇ, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಸಂಘಟನೆಯಂತ ಬಂದಾಗ ಸಂಸದರು, ಶಾಸಕರು ಹಾಗೂ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿ, ಸಂಘಟನೆಗೆ ಮುಜುಗರ ತರುವುದು ಬೇಡ. ಕಾರ್ಯಕರ್ತರು ಹಾಗೂ ಮುಖಂಡರು ಸಹ ಪಕ್ಷಕ್ಕೆ ನಿಷ್ಠೆಯಿಂದ ದುಡಿದರೆ, ಖಂಡಿತ ಅಧಿಕಾರ ದೊರೆಯುತ್ತದೆ. ಇದನ್ನು ಪಡೆದುಕೊಳ್ಳಲು ಸಹನೆ, ತಾಳ್ಮೆ ಇರಬೇಕು. ಕ್ಷೇತ್ರದ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ದೊರೆಯುವಂತೆ ಮಾಡಬೇಕು. ಮುಂಬರುವ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಎಲ್ಲರು ಹೊಂದಾಣಿಕೆಯೊಂದಿಗೆ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮುರ್ತಿ, ಎಚ್.ಎಂ. ಗಣೇಶ್‍ಪ್ರಸಾದ್ ಮಾತನಾಡಿ ಜಿಲ್ಲೆಯಲ್ಲಿ ನಮ್ಮ ಪಕ್ಷ ಸದೃಢವಾಗಿ ಸಂಘಟನೆಯಾಗುತ್ತಿದೆ. ಇದರೊಟ್ಟಿಗೆ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಜೊತೆಗೆ ಇತರೇ ಚುನಾವಣೆಗಳು ಬಂದಾಗ ಅವರಿಗೆ ತಕ್ಕ ಉತ್ತರವನ್ನು ನಾವು ನೀಡಬೇಕಾಗಿದೆ. ನಮ್ಮದು ಜಾತ್ಯತೀತ ಹಾಗೂ ಎಲ್ಲಾ ವರ್ಗದವರನ್ನು ಒಳಗೊಂಡಿರುವ ಪಕ್ಷವಾಗಿದೆ. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗೆಗೆ ಹೆಚ್ಚಿನ ಕಾಳಜಿಯನ್ನು ಹೊಂದಿ ಅವರ ಶ್ರೇಯೋಭಿವೃದ್ದಿಗೆ ದುಡಿಯುತ್ತಿದೆ. ಸಹಕಾರ ಸಂಘಗಳ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯವಾಗಬೇಕು. ಜನರಿಗೆ ಉತ್ತಮ ಕೆಲಸವನ್ನು ಮಾಡಿಕೊಡಲು ಮುಂದಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯ ತಂಡ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಜಿಲ್ಲೆಯಲ್ಲಿ ಮತ್ತಷ್ಟು ಗಟ್ಟಿಯಾಗಿ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಸತ್ಯ ಶೋಧನಾ ಸಮಿತಿಯ ಸದಸ್ಯ ಶಾಸಕ ಸಿ. ರಘುಮೂರ್ತಿ, ಮಾಜಿ ಶಾಸಕ ವೆಂಕಟರಣಯ್ಯ್ಪ, ಕೆಪಿಸಿಸಿ ಉಪಾಧ್ಯಕ್ಷರಾದ ಸೂರಜ್ ಹೆಗಡೆ, ಸಿ.ಎಸ್. ದ್ವಾರಕನಾಥ್, ಮಾಜಿ ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆಪಿಸಿಸಿ ವೀಕ್ಷಕ ಬಸವರಾಜು, ಸದಸ್ಯ ಶಿವನಾಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಬ್ಲಾಕ್ ಅಧ್ಯಕ್ಷ ಗುರುಸ್ವಾಮಿ, ಜಿ.ಪಂ. ಮಾಜಿ ಸದಸ್ಯರಾದ ಸದಾಶಿವಮೂರ್ತಿ, ಮಹೇಶ್, ಪು. ಶ್ರೀನಿವಾಸನಾಯಕ, ಸಿ.ಎ. ಮಹದೇವಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಭಾಗ್ಯಮ್ಮ, ಹೊಂಗನೂರು ಜಯರಾಜ್, ಗೌಡಹಳ್ಳಿ ರಾಜೇಶ್, ಕಾರ್ಮಿಕರ ವಿಭಾಗದ ಅಧ್ಯಕ್ಷ ಮಹೇಶ್ ಮೊದಲಾಧವರು ಇದ್ದರು.