12 ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೊಬೆಷನರ್ ಪರೀಕ್ಷೆ ಯಶಸ್ವಿ
ಕೋಲಾರ,ಆ,೨೮- ನಗರದ ೧೨ ಕೇಂದ್ರಗಳಲ್ಲಿ ನಡೆದ ೨೦೨೩-೨೪ ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ ೪೪೨೨ ಅಭ್ಯರ್ಥಿಗಳ ಪೈಕಿ ಬೆಳಗಿನ ಅವಧಿ ಪರೀಕ್ಷೆಗೆ ೧೬೩೦ ಮಂದಿ ಹಾಗೂ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ ೧೬೩೪ ಮಂದಿ ಗೈರಾಗಿದ್ದು, ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕೃಷ್ಣಮೂರ್ತಿ, ಬೆಳಗ್ಗೆ ೧೦ರಿಂದ ೧೨ ರವರೆಗೂ ನಡೆದ ಬೆಳಗಿನ ಅವಧಿಯ ಪರೀಕ್ಷೆಗೆ ನಗರದ ೧೨ ಕೇಂದ್ರಗಳಲ್ಲಿ ಒಟ್ಟು ೪೪೨೨ ಮಂದಿ ನೋಂದಾಯಿಸಿದ್ದು, ಅವರ ಪೈಕಿ ೨೭೯೨ ಮಂದಿ ಹಾಜರಾಗಿದ್ದರು ಮತ್ತು ೧೬೩೦ ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ ೨ ಗಂಟೆಯಿಂದ ೪ ಗಂಟೆವರೆಗೂ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ ೪೪೨ ಮಂದಿ ಪೈಕಿ ೨೭೮೮ ಮಂದಿ ಹಾಜರಾಗಿದ್ದು ೧೬೩೪ ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ಬಿ.ನಿಖಿಲ್ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ದತೆಗಳು ಮತ್ತು ಪರೀಕ್ಷಾ ವಿಧಾನದ ಕುರಿತು ಪರಿಶೀಲನೆ ನಡೆಸಿದರು.
ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.
ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿತ್ತು. ಪೂರ್ಣ ತೋಳಿನ ಶರ್ಟ್, ಶೂಹಾಕಿದ್ದರೂ ಪ್ರವೇಶವಿರಲಿಲ್ಲ.
ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿತ್ತು.
ನಗರದ ೧೨ ಕೇಂದ್ರಗಳಲ್ಲಿನ ಹಾಜರಾತಿ ವಿವರ ನೀಡಿರುವ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೫೫೮ ಮಂದಿ ನೋಂದಾಯಿಸಿದ್ದು ೪೨೮ ಮಂದಿ ಹಾಜರಾಗಿ ೧೩೦ ಮಂದಿ ಗೈರಾಗಿದ್ದರು. ಬಾಲಕರ ಪಿಯು ಕಾಲೇಜು ಕೇಂದ್ರದಲ್ಲಿ ೪೮೦ ಮಂದಿ ಪೈಕಿ ೩೧೮ ಮಂದಿ ಹಾಜರಾಗಿ ೧೬೨ ಮಂದಿ ಗೈರಾಗಿದ್ದರು.
ಬಾಲಕಿಯರ ಪದವಿ ಪೂರ್ವ ಕಾಲೇಜುಕೇಂದ್ರದಲ್ಲಿ ೨೮೮ ಮಂದಿ ನೋಂದಾಯಿಸಿದ್ದು, ೧೯೨ ಮಂದಿ ಹಾಜರಾಗಿ ೯೬ ಮಂದಿಗೈರಾಗಿದ್ದರು. ಕಾರಂಜಿಕಟ್ಟೆಯ ಸುಭಾಷ್ ಶಾಲೆಯಲ್ಲಿ ೩೩೬ ಮಂದಿ ನೋಂದಾಯಿಸಿದ್ದು, ೨೨೪ ಮಂದಿ ಹಾಜರಾಗಿ ೧೧೨ ಮಂದಿ ಗೈರಾಗಿದ್ದರು. ಸೆಂಟ್‌ಆನ್ಸ್ ಶಾಲೆಯಲ್ಲಿ ೨೮೮ ಮಂದಿ ಪೈಕಿ ೧೭೧ ಮಂದಿ ಹಾಜರಾಗಿದ್ದು, ೧೧೭ ಮಂದಿ ಗೈರಾಗಿದ್ದರು.
ಮೆಥೋಡಿಸ್ಟ್ ಶಾಲೆ ಕೇಂದ್ರದಲ್ಲಿ ೨೬೪ ಮಂದಿ ಪೈಕಿ ೧೫೩ ಮಂದಿ ಹಾಜರಾಗಿದ್ದು, ೧೧೧ ಮಂದಿ ಗೈರಾಗಿದ್ದರೆ, ಅಲಮಿನ್ ಕಾಲೇಜು ಕೇಂದ್ರದಲ್ಲಿ ೨೪೦ ಮಂದಿ ಪೈಕಿ ೧೨೯ ಮಂದಿ ಹಾಜರಾಗಿದ್ದು, ಅಲ್ಲಿಯೂ ೧೧೧ ಮಂದಿ ಗೈರಾಗಿದ್ದರು.
ಎಸ್‌ಡಿಸಿ ಕಾಲೇಜು ಕೇಂದ್ರದಲ್ಲಿ ೫೭೬ ಮಂದಿ ಪೈಕಿ ೨೩೮ ಮಂದಿ ೩೩೮ ಮಂದಿ ಹಾಜರಾಗಿದ್ದು, ೨೩೮ ಮಂದಿ ಗೈರಾಗಿದ್ದರು. ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ ೪೮೦ ಮಂದಿ ಪೈಕಿ ೩೦೫ ಮಂದಿ ಹಾಜರಾಗಿದ್ದು, ೧೭೫ ಮಂದಿ ಗೈರಾಗಿದ್ದರೆ, ಎಸ್‌ಡಿಸಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ೩೩೬ ಮಂದಿ ಪೈಕಿ ೧೯೯ ಮಂದಿ ಹಾಜರಾಗಿದ್ದು, ೧೩೭ ಮಂದಿ ಗೈರಾಗಿದ್ದಾರೆ.
ಉಳಿದಂತೆ ಮಹಿಳಾ ಸಮಾಜ ಪ್ರೌಢಶಾಲೆಕೇಂದ್ರದಲ್ಲಿ ೩೩೬ ಮಂದಿ ಪೈಕಿ ೧೯೭ ಮಂದಿ ಹಾಜರಾಗಿದ್ದು, ೧೩೯ ಮಂದಿ ಗೈರಾಗಿದ್ದಾರೆ. ಮಹಿಳಾ ಸಮಾಜ ಪಿಯು ಕಾಲೇಜು ಕೇಂದ್ರದಲ್ಲಿ ೨೪೦ ಮಂದಿ ಪೈಕಿ ೧೩೮ ಮಂದಿ ಹಾಜರಾಗಿ ೧೦೨ ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.