ಸದ್ಭಕ್ತರ ಹೃದಯದಲ್ಲಿ ಮರುಳ ಶಂಕರ ದೇವರು ಇಂದಿಗೂ ಅಜರಾಮರ: ಶಿವಬಸವ ಸ್ವಾಮೀಜಿ
ಅಥಣಿ : ಆ.೨೮:ಇಲ್ಲಿನ ಸುಕ್ಷೇತ್ರ ಗಚ್ಚಿನಮಠದಲ್ಲಿ ಮೌನ ಯೋಗಿ ಮರುಳ ಶಂಕರ ದೇವರು ಅವರ ೧೨ನೇ ಸ್ಮರಣೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿಂದ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿAದ ಜರುಗಿತು.
ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಅವರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅಥಣಿಯ ಗಚ್ಚಿನ ಮಠವು ಶಿವಯೋಗದ ಶಿಖರವಾಗಿದೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳು ಮತ್ತು ಮೌನ ಯೋಗಿ ಮರುಳ ಶಂಕರ ದೇವರು ನಡೆದಾಡುವ ದೇವರು ಎನಿಸಿಕೊಂಡು ಈ ಭೂಮಿಯನ್ನು ಪಾವನಗೊಳಿಸಿದ್ದಾರೆ. ಶಿವಯೋಗ ಸಾಧನೆಯ ಮೂಲಕ ಮುರುಗೇಂದ್ರ ಸ್ವಾಮೀಗಳು ಅಥಣಿಯ ಶಿವಯೋಗಿಗಳೆಂದು ಪ್ರಖ್ಯಾತರಾದರು. ಪಂಚಾಕ್ಷರಿ ಗವಾಯಿಗಳು ತಮ್ಮ ಸಂಗೀತ ಸಾಧನೆಯ ಮೂಲಕ ಗಾನಯೋಗಿ ಎನಿಸಿಕೊಂಡರು. ಮೌನದಲ್ಲಿಯೇ ಇದ್ದುಕೊಂಡು, ಪರಿಶುದ್ಧ ಮನಸ್ಸಿನಿಂದ ಶಿವಯೋಗಿಗಳ ಸೇವೆ ಮಾಡಿದ ಮರುಳ ಶಂಕರ ದೇವರು ಮೌನಯೋಗಿಗಳೆಂದು ಪ್ರಖ್ಯಾತರಾಗಿದ್ದಾರೆ. ಅವರು ಯಾವುದೇ ಪೀಠಾಧಿಕಾರ ಬಯಸದೆ ನಿಸ್ವಾರ್ಥ ಸೇವೆಯನ್ನ ಸಲ್ಲಿಸುವ ಮೂಲಕ ಶತಾಯುಷಿಗಳಾಗಿ ಬದುಕಿ ಲಿಂಗೈಕರಾಗಿ ಇಂದಿಗೆ ೧೨ ವರ್ಷ ಗತಿಸಿದರೂ ಕೂಡ ಅಥಣಿಯ ಸದ್ಭಕ್ತರ ಹೃದಯದಲ್ಲಿ ಇಂದಿಗೂ ಅಜರಾಮರವಾಗಿ ಹಚ್ಚು ಹಸಿರಾಗಿದ್ದಾರೆ. ಇಂಥ ಮಹಾತ್ಮರ ಬದುಕೇ ನಮ್ಮೆಲ್ಲರಿಗೆ ಒಂದು ಆದರ್ಶ ಮತ್ತು ದಾರಿದೀಪವಾಗಿದೆ ಎಂದು ಬಣ್ಣಿಸಿದರು.
ಸುಕ್ಷೇತ್ರ ಗಚ್ಚಿನಮಠದಿಂದ ಆರಂಭವಾದ ಶ್ರೀ ಮರುಳ ಶಂಕರ ದೇವರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ಗಚ್ಚಿನಮಠದಲ್ಲಿ ಸಮಾವೇಶಗೊಂಡಿತು. ನಂತರ ಮಧ್ಯಾಹ್ನ ಸಾವಿರಾರು ಸದ್ಭಕ್ತರು ಶ್ರೀ ಶಿವಯೋಗಿಗಳ ಮತ್ತು ಮರಳು ಶಂಕರ ದೇವರ ಗದ್ದುಗೆಯ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದರು. ಗಚ್ಚಿನ ಮಠದ ಸೇವಾರ್ಥಿಗಳು ಅನ್ನ ಸಂತ್ರಪಣೆಯ ಕಾರ್ಯ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ, ನಿತ್ಯಾನಂದ ಚಿರಂತಿಮಠ, ಮಹದೇವ ಹೊನ್ನಳ್ಳಿ, ಬಸು ಹಳ್ಳದಮಳ, ಶ್ರೀಶೈಲ ಹಳ್ಳದಮಳ, ಚನ್ನಬಸಯ್ಯ ಇಟ್ನಾಳಮಠ, ವಿವೇಕ ಮೆಣಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.