ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರೋಧಿಸಿ ಸಿದ್ಧರಾಮಯ್ಯ ಸರ್ಕಾರ ಬೆಂಬಲಿಸಿ ಡಾ. ಸಾಗರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಕಲಬುರಗಿ:ಆ.27:ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವುದನ್ನು ವಿರೋಧಿಸಿ, ಜನಪರವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಸೆಪ್ಟೆಂಬರ್ 29ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಾಡ್ಯ ಜಾತಿ, ಕೋಮು ಬೆಂಗಾವಲಿಟ್ಟುಕೊಂಡು ಅಧಿಕಾರದ ಗದ್ದುಗೆಯನ್ನು ಏರಿರುವ ಬಿಜೆಪಿ, ಜೆಡಿಎಸ್ ಸರ್ಕಾರದ ಕುರಿತು ಇಟ್ಟುಕೊಂಡ ಭಯವು ಈಗ ನಿಜವಾಗುತ್ತಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತ್ತು ಸಂವಿಧಾನ ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದು ದೂರಿದರು.
ಜನಪರ ಆಡಳಿತ ನೀಡುವೆವೆಂದು ಸಬಕ್ ಸಾಥ್, ಸಬಕ್ ಕಾ ವಿಕಾಸ್ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರ ಜನರಿಂದ ಆಯ್ಕೆಯಾದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಇಟ್ಟುಕೊಂಡು ತನ್ನ ಚಾಳಿಯನ್ನು ಆರಂಭಿಸಿದೆ. ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ಹಿಂದುಳಿದ ಸಮುದಾಯದಿಂದ ಬಂದ ಶೋಷಿತರ ಧೀಮಂತ ನಾಯಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕೆಂದು ಮನುವಾದಿಗಳ ಪಕ್ಷವಾದ ಬಿಜೆಪಿ- ಜೆಡಿಎಸ್ ಕುತಂತ್ರವಾಗಿದೆ. ರಾಜ್ಯದ ಎಲ್ಲ ಕಾಲದಲ್ಲಿ ದ್ವೇಷದ ರಾಜಕಾರಣವನ್ನೇ ಉಸಿರಾಡುತ್ತಿರುವ ಬಿಜೆಪಿ, ಜೆಡಿಎಸ್ ನಾಯಕರು ರಾಜಭವನವನ್ನು ಮತ್ತು ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.
ರಾಜ್ಯಪಾಲರ ನೋಟಿಸಿಗೆ ಕಳೆದ ಜುಲೈ 26ರಂದು ಟಿ.ಜೆ. ಅಬ್ರಾಹಂ ದೂರು ದಾಖಲಿಸಿದ ಕೂಡಲೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದಾರೆ. ರಾಜ್ಯದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆ ಕೈಗೊಳ್ಳಲು ಎಚ್ಚರಿಕೆ ನೋಟಿಸ್ ನೀಡಿದ್ದು ಕಾನೂನು ಬಾಹಿರವಾಗಿದ್ದು, ಕೂಡಲೇ ನೋಟಿಸ್ ಹಿಂಪಡೆಯಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಅದನ್ನು ಮಾನ್ಯತೆ ಮಾಡದೇ ಇರುವುದು ಮನುವಾದಿಗಳ, ಜಾತಿವಾದಿಗಳ ಜೊತೆಗೆ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದು ಜಗಜ್ಜಾಹಿರಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನರೆಡ್ಡಿ ಅವರ ವಿರುದ್ಧ ದೂರು ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಆದಾಗ್ಯೂ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ದೂರು ಬಂದ ತಕ್ಷಣ ವಿಚಾರಣೆಗೆ ಅನುಮತಿ ನೀಡಿರುವುದು ನೋಡಿದರೆ ರಾಜಭವನವು ಕೇಂದ್ರ ಬಿಜೆಪಿ ಸರ್ಕಾರದ ಅಡ್ಡಾವಾಗಿದೆ ಎಂದು ಅವರು ಹರಿಹಾಯ್ದರು.
ಮುಖ್ಯಮಂತ್ರಿಗಳು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಚಿಂತನೆ ನಡೆಸುವ ಮುಂಚೂಣಿ ನಾಯಕರಾಗಿದ್ದಾರೆ. ಕಳೆದ 40 ವರ್ಷಗಳ ಕಾಲ ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಜನರ ಸೇವೆ ಮಾಡಿದ್ದಾರೆ. ಈಗ ಆರ್‍ಎಸ್‍ಎಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು ರಾಜ್ಯಪಾಲರ ಮೂಲಕ ಅವರ ವಿರುದ್ಧ ಶಡ್ಯಂತ್ರ ಮಾಡುತ್ತಿದ್ದಾರೆ. ಹಿಂದುಳಿದ ನಾಯಕನೊಬ್ಬ ಎರಡನೇ ಬಾರಿ ಮುಖ್ಯಮಂತ್ರಿಗಳಾಗಿ ಒಳ್ಳೆಯ ಆಡಳಿತ ನೀಡುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ಕೆಳ ಮಟ್ಟದ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿಕಾರಿದರು.
ಸಚಿವ ಸಂಪುಟದ ನಿರ್ಧಾರಕ್ಕೆ ನಾನು ಬದ್ಧನಾಗಿರಬೇಕಾಗಿಲ್ಲ. ಆದ್ದರಿಂದ ಅನುಮತಿ ನೀಡಲಾಗಿದೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಸಚಿವ ಸಂಪುಟದ ನಿರ್ಧಾರ ತಿರಸ್ಕರಿಸಿದರೂ ಯಾವ ಆಧಾರದಲ್ಲಿ ನೀಡಲಾಗುತ್ತಿದೆ ಎಂಬುದರ ಕುರಿತು ವಿವರಣೆ ಕೊಡಬೇಕಾಗಿತ್ತು. ಆದಾಗ್ಯೂ, ಆ ಆದೇಶದಲ್ಲಿ ಆ ಕುರಿತು ಒಂದೇ ಒಂದು ಸಾಲು ಇಲ್ಲ. ಇದೊಂದು ವಿವೇಚನಾರಹಿತ ಅನುಮತಿಯಾಗಿದೆ ಎಂದು ಅವರು ದೂರಿದರು.
ಶೋಕಾಸ್ ನೋಟಿಸಿಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇ ಇಲ್ಲ. ಜನರಿಂದ ಆಯ್ಕೆಯಾದ ರಾಜ್ಯಪಾಲರು ಜನಾದೇಶ ಪಡೆದ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದು ಅಸಮಂಜಸವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರು ಜನರಿಂದ ಆಯ್ಕೆಯಾಗಬೇಕು. ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಆಶಿಸಿದ್ದರು. ಬಿಜೆಪಿ ನೇತೃತ್ವದ ಎನ್‍ಡಿಎ ಕೇಂದ್ರ ಸರ್ಕಾರ ಜನರಿಂದ ಆಯ್ಕೆಗೊಂಡು ಬಿಜೆಪಿಯೇತರ ಸರ್ಕಾರಗಳನ್ನು ವಾಮ ಮಾರ್ಗದಿಂದ ಪತನಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿ, ಜೆಡಿಎಸ್ ನಡೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲ ಪ್ರಗತಿಪರರು, ಸಿದ್ಧರಾಮಯ್ಯ ಅವರ ಅಭಿಮಾನಿಗಳು ಭಾಗವಹಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಹಾದಿಮನಿ, ಉಮೇಶ್ ನರೋಣಾ, ಎಸ್.ಪಿ. ಸುಳ್ಳದ್, ಬಿ.ಸಿ. ವಾಲಿ, ಕೃಷ್ಣಪ್ಪ ಕರಣಿಕ್, ರೇವಣಸಿದ್ಧ ಜಾಲಿ, ಅಂಬಣ್ಣ ಜೀವಣಗಿ ಮುಂತಾದವರು ಉಪಸ್ಥಿತರಿದ್ದರು.