ಶರಣರ ಉಚ್ಛಾಯಿ ಮತ್ತು ಜಾತ್ರೆ ಉತ್ಸವದ ಯಾತ್ರೆ
ಕಲಬುರಗಿ:ಆ.27:ಮಹಾದಾಸೋಹಿ ಶರಣಬಸವೇಶ್ವರರ ಉಚ್ಛಾಯಿ ಮತ್ತು ಜಾತ್ರಾ ಮಹೋತ್ಸವು ಉತ್ಸವದ ಯಾತ್ರಾ ಮಹೋತ್ಸವಾಗಿರುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಶರಣಬಸವರ ಉಚ್ಛಾಯಿ ಮತ್ತು ಜಾತ್ರಾ ಮಹೋತ್ಸವ ಎಂಬ ವಿಷಯ ಕುರಿತು ಮಾತನಾಡಿದರು.
ಪ್ರತಿ ವರ್ಷ ನಡೆಯುವ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಮುನ್ನಾದಿನ ಉಚ್ಛಾಯಿ ಜರುಗುತ್ತದೆ ಅದು ಗುರುವಿಗೆ ಸಲ್ಲಿಸುವ ಪೂಜೆಯಾಗಿದೆ ಮರುದಿನ ವಿಜೃಂಭಣೆಯಿಂದ ನಡೆಯುವ ರಥೋತ್ಸವ ಶರಣರಿಗೆ ಸಲ್ಲುತ್ತದೆ. ಶರಣಬಸವರು ಲಿಂಗೈಕ್ಯದ ನಂತರ ನಿರಂತರವಾಗಿ 202 ವರ್ಷಗಳಿಂದ ಈ ಪರಂಪರೆ ಜರುಗುತ್ತಿದೆ. ಉಚ್ಛಾಯಿ ಮತ್ತು ರಥೋತ್ಸವಕ್ಕೆ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕ ಅಲ್ಲದೆ ದೇಶ ವಿದೇಶಗಳಿಂದ ಲಕ್ಷ ಲಕ್ಷ ಶರಣರ ಭಕ್ತರು ಬಂದು ಶರಣರ ದರ್ಶನ ಪಡೆಯುತ್ತಾರೆ. ಸುಮಾರು 20 ದಿನಗಳವರೆಗೆ ನಡೆಯುವ ಜಾತ್ರಾ ಮಹೋತ್ಸವದ ಸಂಭ್ರಮ ನೋಡುವುದೇ ದೊಡ್ಡ ಸಂತೋಷವಾಗಿರುತ್ತದೆ. ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಉಚ್ಛಾಯಿ ಮತ್ತು ಪೂಜ್ಯ ಡಾ.ಅಪ್ಪ ಅವರು ಶಂಖ ಉದಿ, ಲಿಂಗ ಸಜ್ಜಿಕೆಯನ್ನು ಭಕ್ತರಿಗೆ ತೋರಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ದೊರಕುತ್ತದೆ. ಅಂದು ಎಲ್ಲ ಭಕ್ತರು ಉಪವಾಸ ಇದ್ದು ರಥೋತ್ಸವದ ನಂತರ ಉಪವಾಸ ಬಿಟ್ಟು ಶರಣರ ಕೃಪೆಗೆ ಪಾತ್ರರಾಗುತ್ತಾರೆ. ಮಹಾಮಹಿಮ ಶರಣಬಸವರು ನಿರಂತವಾಗಿ ಸೂರ್ಯ ಚಂದ್ರರು ಇರುವವರೆಗೂ ಲೀಲೆಗಳು ಮಾಡುತ್ತಾನೆ ಇರುತ್ತಾರೆ. ಎಲ್ಲ ಜಾತಿ ಜನಾಂಗದವರು ಶರಣಬಸವರನ್ನು ಪೂಜಿಸುತ್ತಾರೆ. ಅವರೆಲ್ಲರಿಗೂ ಶರಣರು ಬೇಡಿದನ್ನು ದಯಪಾಲಿಸುವ ಕರುಣಾಮಯಿಯಾಗಿದ್ದಾರೆ. ಭಕ್ತಿ, ಶ್ರದ್ಧೆಯಿಂದ ಶರಣರನ್ನು ಯಾರು ಪೂಜಿಸುತ್ತಾರೆಯೋ ಅವರಿಗೆ ಶರಣರು ಎಂದು ಕೈ ಬಿಡುವುದಿಲ್ಲ. ಅವರ ಕಷ್ಟಕಾರ್ಪಣ್ಯಗಳನ್ನು ದೂರಮಾಡುತ್ತಾರೆ ಅದರ ಅನುಭವಗಳನ್ನು ಪ್ರತಿಯೊಬ್ಬರಿಗೂ ಅಗಿದೆ ಎಂದು ಹೇಳಿದರು.