ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಕಲಬುರಗಿ,ಆ.27-ಡಿಪ್ಲೋಮಾ ಪ್ರಥಮ ವರ್ಷದ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದಕ್ಕೆ ಮನನೊಂದು ನೇಣು ಹಾಕಿಕೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪ್ರಭುದೇವ ನಗರದಲ್ಲಿ ನಡೆದಿದೆ.
ಪಂಕಜಾ ಶರಣಪ್ಪ ವಡಗೇರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಪಂಕಜಾ ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ 30/17 ಅಂಕ ಪಡೆದಿದ್ದಳು. ಚೆನ್ನಾಗಿ ಅಂಕ ಪಡೆದಿರುವೆ ಎಂದು ಮನೆಯವರು ಪ್ರಶಂಸೆ ಮಾಡಿದರೂ ತನಗೆ ಇನ್ನೂ ಹೆಚ್ಚಿನ ಅಂಕ ಬರಬೇಕಿತ್ತು ಎಂದು ಅಸಮಾಧಾನಗೊಂಡು ಮನನೊಂದು ಮನೆಯಲ್ಲಿನ ಜಂತಿಯ ರಾಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೃತಳ ತಂದೆ ಶರಣಪ್ಪ ವಡಗೇರಿ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಪಾಶ್ರ್ವವಾಯುನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಯಳವಂತಗಿ (ಕೆ) ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ತಂದೆ ಆನಂದರಾವ ಮಾಲಿಪಾಟೀಲ (40) ಆತ್ಮಹತ್ಯೆ ಮಾಡಿಕೊಂಡವರು.
ಮಲ್ಲಿಕಾರ್ಜುನ ಅವರು ಕಳೆದ ಎರಡು ವರ್ಷಗಳಿಂದ ಪಾಶ್ರ್ವವಾಯುದಿಂದ ಬಳಲುತ್ತಿದ್ದರು. ಇದರಿಂದ ಸಾಕಷ್ಟು ನೊಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆ.14 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.24 ರಂದು ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಸಿದ್ದಣ್ಣ ಮಾಲಿಪಾಟೀಲ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೈಕ್ ಡಿಕ್ಕಿ: ಯುವಕ ಸಾವು
ಬೈಕ್ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಳಂದ ರಸ್ತೆಯ ಜೈಭವಾನಿ ಧಾಬಾ ಹತ್ತಿರ ನಡೆದಿದೆ.
ಮೃತನನ್ನು ಆಳಂದ ತಾಲ್ಲೂಕಿನ ಮಾದನಹಿಪ್ಪರಗಾದ ಅನೀಲ ವಿಠ್ಠಲ ಮಾನೆ (25) ಎಂದು ಗುರುತಿಸಲಾಗಿದೆ.
ಕೆರೆಭೋಸಗಾ ಕ್ರಾಸ್‍ದಿಂದ ಆಳಂದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.