ಏಕೀಕೃತ ಪಿಂಚಣಿ:ಮಾಧ್ಯಮಿಕ ಶಿಕ್ಷಕ ಸಂಘ ಸ್ವಾಗತ
ಕಲಬುರಗಿ,ಆ 27: ಏಕೀಕೃತ ಪಿಂಚಣಿ ಯೋಜನೆಯುಸರ್ಕಾರಿ ಶಿಕ್ಷಕರಿಗೆ ಆರ್ಥಿಕ ಭದ್ರತೆ ಒದಗಿಸುವ ಒಂದು ಮಹತ್ವದ ಹೆಜ್ಜೆ ಆಗಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಪಾಲ ಭೋಗಾರ ಸ್ವಾಗತಿಸಿದ್ದಾರೆ.
ಕಾಲಕಾಲಕ್ಕೆ ಯುವ ಶಿಕ್ಷಕರ ಅಪೇಕ್ಷೆ ಅಭಿಪ್ರಾಯ ಮುಂದಾಲೋಚನೆಗಳು ವಿಭಿನ್ನವಾಗಿದ್ದು, ಅವುಗಳನ್ನು ಪರಿಗಣಿಸಿ ಏಕೀಕೃತ ಪಿಂಚಣಿ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ. ಇದರ ಜೊತೆಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಿ ಅದನ್ನು ಆಯ್ಕೆಗಾಗಿ ಮುಕ್ತವಾಗಿರಿಸುವಂತೆ ಒತ್ತಾಯಿಸಿದರು.
ಅನುದಾನಿತ ಶಿಕ್ಷಕರಿಗೆ ಕರ್ನಾಟಕದಲ್ಲಿ ಯಾವುದೇ ಯೋಜನೆ ಇಲ್ಲದಿರುವುದು ದುರ್ದೈವ ಅದಕ್ಕಾಗಿ ನಮ್ಮ ಹೋರಾಟ ಮುಂದುವರಿಸಬೇಕಾಗಿದೆ ಎಂದರು. ಪದಾಧಿಕಾರಿಗಳಾದ ರಾಜ್ಯ ಕಾರ್ಯದರ್ಶಿ, ಮಹೇಶ ಬಸರಕೋಡ ಸಹ ಕಾರ್ಯದರ್ಶಿ ಅನಿಲ ಕುಮಾರ ಬಿರಾದಾರ್ ಹಾಗೂ ವಿಭಾಗ ಪ್ರಮುಖ ಚಂದ್ರಶೇಖರ ಪಾಟೀಲ ಯೋಜನೆಯನ್ನು ಸ್ವಾಗತಿಸಿದ್ದಾರೆ.