ತ್ರಿಮತಸ್ಥ ಅಭಿವೃದ್ದಿ ನಿಗಮ ಮಂಜೂರು ಮಾಡಲು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಕೆ
ವಿಜಯಪುರ,ಆ.27:ತ್ರಿಮತಸ್ಥ ಚರ್ಮಕಾರರನ್ನು ಸಮಗಾರ, ಮಚಗಾರ, ಡೋಹರ, ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಯಿಂದ ಪ್ರತ್ಯೇಕಗೊಳಿಸಲು ಸ್ವತಂತ್ರ ಜಾತಿ ಎಂದು ಘೋಷಿಸುವುದು ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಕರ್ನಾಟಕ ರಾಜ್ಯದ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ ಜೈನಾಪೂರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ತ್ರಿಮಸ್ಥ ಚರ್ಮಕಾರ ಎಲ್ಲ ಪದಾಧಿಕಾರಿಗಳ ಜೊತೆಗೂಡಿ ಮಾದಿಗ ಸಂಬಂಧಿತ ಜಾತಿಯಿಂದ ಪ್ರತ್ಯೇಕಗೊಳಿಸಿ ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕರ್ನಾಟಕ ರಾಜ್ಯಾದ್ಯಾಂತ ಸಮಗಾರ, ಮಚಗಾರ ಹಾಗೂ ಡೋಹರ ಎಂಬ ಮೂರು ಹೆಸರುಗಳಿಂದ ಕರೆಯಲ್ಪಡುವ ಜಾತಿ ಗಣತಿಯ ಪ್ರಕಾರ 14 ಲಕ್ಷ ಜನಸಂಖ್ಯೆವುಳ್ಳ ತ್ರಿಮತಸ್ಥ ಚರ್ಮಕಾರ ಸಮುದಾಯವು ವ್ಯಾಪ್ತಿಗೆ ಬರುವ 18 ಜಾತಿಗಳನ್ನು ಸದಾಶಿವ ಆಯೋಗ ಮಾದಿಗ ಜಾತಿ ಪಟ್ಟಿಯಲ್ಲಿ ಸೇರಿರುತ್ತದೆ. ಈ ತಪ್ಪು ಕ್ರಮದಿಂದಾಗಿ ರಾಜಕೀಯ ಸ್ಥಾನಮಾನಗಳು ಸರಕಾರಿ ಉದ್ಯೋಗಗಳು ಮುಂತಾದ ಸ್ಥಾನಮಾನಗಳು ಸಾಧ್ಯವಿಲ್ಲವಾಗಿದೆ ಎಂದು ಹೇಳಿದರು.
ಡಾ. ಬಾಬು ಜಗಜೀವನರಾಮ ಕಾಲೋನಿಯ ಅಭಿವೃದ್ದಿ ಸಂಘದ ಕಾರ್ಯದರ್ಶಿ ಬಸವರಾಜ ಹೊನಮೊರೆ ಮಾತನಾಡಿ, ತ್ರಿಮತಸ್ಥರು ಮಾದಿಗ ಸಂಬಂಧಿತ ಜಾತಿಯವರು ಎಂಬ ನೆಪದಲ್ಲಿ ತ್ರಿಮತಸ್ಥಿನ ಪಾಲಿನ ಎಲ್ಲಾ ಉದ್ಯೋಗ ಅವಕಾಶಗಳು ಹಾಗೂ ಅಪೂರ್ವ ರಾಜಕೀಯ ಅವಕಾಶಗಳು ಮಾತ್ರವಲ್ಲದೆ ರಾಜ್ಯ ಪ್ರತಾಂಕಿತ ಉದ್ಯೋಗಗಳನ್ನು ತಪ್ಪಿಸಿ ಮಾದಿಗ ಸಮುದಾಯದವರು ಪಡೆದುಕೊಂಡ ನಿದರ್ಶನಗಳು ಸಾಕಷ್ಟಿವೆ. ತ್ರಿಮತಸ್ಥ ಚರ್ಮಕಾರರಿಗೆ ಅನ್ಯಾಯವಾಗುತ್ತಲೆ ಬಂದಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಅಧ್ಯಕ್ಷ ಪ್ರಶಾಂತ ಕಿರಣಗಿ ಮಾತನಾಡಿ ತ್ರಿಮತಸ್ಥ ಸಮುದಾಯಕ್ಕೆ ಅಭಿವೃದ್ದಿ ನಿಗಮವನ್ನು ಸಮಸಮಾಜ ನಿರ್ಮಾಣದ ಧ್ಯೇಯವುಳ್ಳ ತಮ್ಮ ಸರಕಾರ ದಯವಿಟ್ಟು ಮಂಜೂರು ಮಾಡಬೇಕು ಹಾಗೂ ತ್ರಿಮಸ್ಥ ಚರ್ಮಕಾರರನ್ನು ಮಾದಿಗ ಸಂಬಂಧಿತ ಜಾತಿಗಳ ಗುಂಪಿನಿಂದ ಪ್ರತ್ಯೇಕಗೊಳಿಸಿ ನಮ್ಮ ಜನಸಂಖ್ಯೆ ಪ್ರಮಾಣಕ್ಕೆ ಸಮನಾದ ಮೀಸಲಾತಿಯನ್ನು ನಿಗದಿಪಡಿಸಿ ತ್ರಿಮತಸ್ಥ ಎಲ್ಲಾ 18 ಜಾತಿಯನ್ನು ಸ್ವತಂತ್ರ ಜಾತಿಯನ್ನಾಗಿ ಘೋಷಿಸಿ ರಾಜ್ಯಪತ್ರದಲ್ಲಿ ಪ್ರಕಟಣೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಕಾಂಬಳೆ, ಸಿದ್ದು ಕಲ್ಲೂರ, ರೋಹಿತ ಭಾವಿಕಟ್ಟಿ, ರಾಘವೇಂದ್ರ ಶಹಾಪೂರ, ಜಗದೀಶ ಮನಗೂಳಿ, ಗೌಡಪ್ಪ ಬಾಗೇವಾಡಿ, ಸಂಜು ಹೊನಕೇರಿ, ಅಭಿಷೇಕ ಹೊನಕೇರಿ, ಮನೋಹರ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.