ಸಿನಿಮಾ ಮತ್ತು ನಾಟಕ ನೋಡುವ ಹವ್ಯಾಸ ಬೆಳೆಯಲಿ : ವಿಷ್ಣುಕಾಂತ
ಬಾಲ್ಕಿ: ಆ.27:ಮನಸ್ಸಿನ ಉಲ್ಲಸತೆಗೆ ಸಾರ್ವಜನಕರಲ್ಲಿ ಸಿನಮಾ ಮತ್ತು ನಾಟಕಗಳನ್ನು ನೋಡುವ ಹವ್ಯಾಸ ಬೆಳೆಯಬೇಕು ಎಂದು ನಟ, ನಿದೇರ್ಶಕ ಬಿ.ಜೆ.ವಿಷ್ಣುಕಾಂತ ಅಭಿಪ್ರಾಯಪಟ್ಟರು.
ಪಟ್ಟಣದ ಪುರಭವನದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡದವರಿಂದ ಪ್ರದರ್ಶನ ಗೊಂಡ ಗೌಡರ ಗದ್ಲ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಮೊಬೈಲ್ ದಾಸರಾಗಿದ್ದೇವೆ. ಕಲೆ ಮತ್ತು ಕಲಾವಿದರನ್ನು ಗುರುತಿಸುವ ಕಾರ್ಯವಾಗುತ್ತಿಲ್ಲ. ನಮ್ಮ ಮನಸ್ಸಿನ ನೆಮ್ಮದಿಗೆ ನಾವು ನಾಟಕ ಮತ್ತು ಸಿನಮಾಗಳು ನೋಡಿ ಮನರಂಜನೆಯಲ್ಲಿ ಪಾಲ್ಗೊಂಡರೆ ಆಗುವ ಸಂತೋಷ ಮತ್ತೊಂದಿಲ್ಲ. ಆದರೆ ಇಂದಿನ ಯುವ ಜನರು ಮೊಬೈಲ್ ದಾಸರಾಗಿ ಎಲ್ಲವನ್ನೂ ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಗಣಪತಿ ಬೋಚರೆ ಮಾತನಾಡಿ, ನಮ್ಮ ಭಾಗದಲ್ಲಿ ಕಲಾವಿದರನ್ನು ಕಲೆಗೆ ಸೀಮಿತವಾಗಿ ನೋಡುತ್ತೇವೆ. ಆದರೆ ಅವರ ವೈಯಕ್ತಿಕ ಜೀವನದ ಏರುಪೇರುಗಳಬಗ್ಗೆ ವಿಚಾರಿಸುವುದಿಲ್ಲ. ಕಲಾವಿದರು ತಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ ಸಭಿಕರನ್ನು ರಂಜಿಸುವಲ್ಲಿಯೇ ತಮ್ಮ ಜೀವನ ಕಳೆಯುತ್ತಾರೆ ಎಂದು ಹೇಳಿದರು.
ರೈತ ಮುಖಂಡ ನಾಗಶೆಟ್ಟೆಪ್ಪ ಲಂಜವಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದೆ ಡಾ| ಪಂಕಜ ಪ್ರಾಸ್ತಾವಿಕಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹೆಲನ್, ಸಂತೋಷ ಬಿಜಿಪಾಟೀಲ ಮತ್ತಿತರರು ಇದ್ದರು.