ಆಳಂದ ಶರಣಮಂಟಪದ 119ನೇ ಜಾತ್ರೆ 4ರಂದು
ಆಳಂದ:ಆ.27: ಪಟ್ಟಣದ ಶರಣಮಂಟಪದ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ 119ನೇ ಜಾತ್ರಾ ಮಹೋತ್ಸವ ಪೀಠಾಧಿಪತಿ ಚನ್ನಬಸವ ಪಟ್ಟದೇವರ ಸಾನ್ನಿಧ್ಯದಲ್ಲಿ ಸೆ.4ರಂದು ಅದ್ಧೂರಿಯಾಗಿ ನಡೆಯಲಿದೆ.
ಮಂಟಪದಲ್ಲಿ ಶ್ರಾವಣ ಮಾಸದಂಗವಾಗಿ ಅಗಸ್ಟ್ 5ರಿಂದ ಆರಂಭಗೊಂಡ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣವನ್ನು ಹಿರೇಬನ್ನಿಗೊಳ ಹಾಗೂ ಹಣವಾಳ ಭಕ್ತಿಯೋಗಾಶ್ರಮದ ಪ್ರಚನ ಪ್ರವೀಣೆ ಮಾತೋಶ್ರೀ ಶಾರದಾದೇವಿ ಅವರಿಂದ ಸಾಗಿಬಂದ ಪುರಾಣವನ್ನು ಮಹಾಮಂಗಲ ಧರ್ಮಸಭೆ ಅಂದು ನಡೆಯಲಿದೆ. ಆಕಾಶವಾಣಿ ಕಲಾವಿದ ಮಡಿವಾಳಯ್ಯಾ ಸ್ವಾಮಿ ಕೊರಳ್ಳಿ ಅವರಿಂದ ಸಂಗೀತ ಸೇವೆ ನಡೆದಿದೆ.
ಸೆ.4ರಂದು ಬೆಳಗಿನ ಜಾವ ಶ್ರಾವಣಮಾಸದ ಬೆಳಗಿನ ಎಲ್ಲಾ ಕಾರ್ಯಕ್ರಮಗಳು ಮಂಗಲಗೊಳಿಸಿ 10:15ಕ್ಕೆ ಪುರಾಣ ಮಹಾಂಗಲ, ಶಿವಶರಣರ ಪಲ್ಲಕಿ ಮತ್ತು ಚನ್ನಬಸವ ಪಟ್ಟದೇವರ ಅಡ್ಡಪಲ್ಲಕ್ಕಿ ಉತ್ಸವ ಹೊರಟು ಸಂಜೆ 7:00ಗಂಟೆಗೆ ಶರಣಮಂಟಪಕ್ಕೆ ತಲುಪಿ ಮಹಾರಥೋತ್ಸವ ನಂತರ ಚನ್ನಬಸವ ಪಟ್ಟದೇವರ ಕೈಲಾಸ ಮಂಟಪ ಮಹಾಪೂಜೆ ಮತ್ತು ಭಕ್ತಾದಿಗಳಿಗೆ ಮಹಾಪ್ರಸಾದ ನೆರವೇರಲಿದೆ.
ಧಾರ್ಮಿಕ ಸಂಸ್ಕಾರ ಬದುಕಿಗೆ ಆಯಾಮ:
ಭಾನುವಾರ ಮಹಾದಾಸೋಹಿ ಶರಣಬಸವೇಶ್ವರರು ಜನ್ಮಸ್ಥಳ ಅರಳುಗುಂಡಗಿಗೆ ಶ್ರೀಗಳೊಂದಿಗೆ ನೂರಾರು ಭಕ್ತಾದಿಗಳು ತೆರಳಿ ದರ್ಶನ ಪಡೆದು ಬಳಿಕ ಸಂಜೆ ನಡೆದ ಪುರಾಣದ ವಿವರಣೆಯಲ್ಲಿ ಮಾತನಾಡಿದ ಮಾತೋಶ್ರೀ ಶಾರದಾದೇವಿ ಅವರು, ಶರಣಬಸವೇಶ್ವರರು ಭಕ್ತರ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ನಡೆ, ನುಡಿ, ಸಂಸ್ಕಾರವಂತರಾಗಿ ಸತ್ಯಶುದ್ಧ ಕಾಯಕ ದಾಸೋಹ ಮತ್ತು ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪುರಾಣ ಪುಣ್ಯಕಥೆಗಳಿಂದ ಬದುಕಿಗೆ ಆಯಾಮವನ್ನು ತಂದುಕೊಡುತ್ತದೆ. ಧರ್ಮ ಮಾರ್ಗ ಸಂಸ್ಕಾರ ಮಾನಸಿಕ ನೆಮ್ಮದಿ ಸುಖ, ಸಂಪತ್ತಿಗೆ ದಾರಿಯಾಗಿದೆ. ಇದನ್ನು ಸನ್ಮಾರ್ಗ ಮತ್ತು ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎಂದು ಶರಣಬಸವೇಶ್ವರ ಪವಾಡಗಳೊಂದಿಗೆ ಬದುಕಿನ ಮೌಲ್ಯಗಳ ಕುರಿತು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಕಮೀಟಿಯ ಮುಖಂಡರು ಹಾಗೂ ನೂರಾರು ಶರಣ, ಶರಣಿಯರು ಉಪಸ್ಥಿತರಿದ್ದರು. ನಂತರ ಮಹಾಮಂಗಲ ಭಕ್ತರಿಗೆ ಪ್ರಸಾದ ನೆರವೇರಿತು.