ಅ.3 ರಂದು ಐಶ್ವರ್ಯ ನಗರದಲ್ಲಿ ಅದ್ದೂರಿ ದಸರಾ ಉತ್ಸವ
ವಿಜಯಪುರ,ಅ.2 : ಇಲ್ಲಿನ ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅ.3ರಂದು ಇದೇ ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಜಂಬುಸವಾರಿ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ವಿವೇಕಾನಂದ ಹುಂಡೆಕಾರ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8:30 ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಜಂಬುಸವಾರಿಯ ಭವ್ಯ ಮೆರವಣಿಗೆಯು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಗುತ್ತದೆ. ನಂತರ ನಗರದ ಆಶ್ರಮ ರಸ್ತೆ, ಐಶ್ವರ್ಯ ನಗರದ ಮುಖ್ಯ ರಸ್ತೆಗಳ ಮೂಲಕ ಹಾಯ್ದು ಸಾಗಲಿದೆ. ಕುಂಭ ಮೇಳದೊಂದಿಗೆ ಒಂಟೆ, ಕುದುರೆ, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಕೊಂಬುಕಹಳೆ ಭವ್ಯ ಮೆರವಣಿಗೆ ನಡೆಯಲಿದ್ದು, ಜಂಬುಸವಾರಿ ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ನಾನಾಗೌಡ ಬಿರಾದಾರ ಮಾತನಾಡಿ, ಒಂಬತ್ತು ದಿನಗಳ ಕಾಲ ನಿರಂತರ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.
ಅ.4 ನೇ ತಾರೀಖಿನಿಂದ ನಿತ್ಯ ಪೂಜೆ ನಡೆಯಲಿದೆ. ದಾಂಡಿಯಾ ಕಾರ್ಯಕ್ರಮ ನೆರವೇರಲಿದೆ. 9 ದಿನಗಳ ಕಾಲ ಚಾಮುಂಡೇಶ್ವರಿ ಪುರಾಣ ಪ್ರವಚನ ನಡೆಯಲಿದ್ದು, 9 ನೇ ದಿನ 5 ಬಡಾವಣೆಯ ಜನ ಸೇರಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಮೈಸೂರಿನಲ್ಲಿ ಸರ್ಕಾರವೆ ಜಂಬುಸವಾರಿ ನಡೆಸುತ್ತದೆ. ಆದರೆ ಇಲ್ಲಿ ಸುತ್ತಲೂ 20 ಬಡಾವಣೆಯ ಜನ ಸೇರಿಕೊಂಡು ತನು ಮನ ಧನದಿಂದ ಕೈ ಜೋಡಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಂಬುಸವಾರಿಗೆ ಆನೆ ತರಲು ಸರ್ಕಾರದ ಅನುಮತಿ ಪಡೆದುಕೊಂಡಿದ್ದೇವೆ ಎಂದರು.
ವಿಜಯಪುರದ ಎಲ್ಲ ಬಡಾವಣೆ ಜನ ಈ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಚಾಮುಂಡೇಶ್ವರಿ ದಸರಾ ಉತ್ಸವ -2024 ರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಸವರಾಜ ಕೋರಿ ಮಾತನಾಡಿ, ಮೈಸೂರು ಮಾದರಿಯಲ್ಲಿ ವಿಜಯಪುರದಲ್ಲಿ ಇದೇ ಪ್ರಥಮ ಬಾರಿಗೆ ಜಂಬುಸವಾರಿ ಮೆರವಣಿಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಸವರಾಜ ಈಳಗೇರ ರಾಜುಗೌಡ ಪಾಟೀಲ, ಭೀಮನಗೌಡ ಬಿರಾದಾರ, ಅಶೋಕ ತಿಮಶೆಟ್ಟಿ, ಬಸವರಾಜ ಕೋರಿ, ಸದಾಶಿವ ಚಿಕರೆಡ್ಡಿ, ಮೃತ್ಯುಂಜಯ ಶಿರೂರ ಹಾಗೂ ಬಡಾವಣೆ ಹಿರಿಯರು ಉಪಸ್ಥಿತರಿದ್ದರು.