7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಅಫಜಲಪುರ:ಆ.27: ಪಟ್ಟಣದ ಕನ್ನಡ ಭವನದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ ಅವರು ಮಾತನಾಡಿ ಬರುವ ಸೆಪ್ಟೆಂಬರ್ 1 ರ ರವಿವಾರದಂದು 11 ಗಂಟೆಗೆ ಅಫಜಲಪುರ ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಪೂಜ್ಯ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪರಿಷತ್ತಿನ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ತಾಲೂಕಿನ ಮುಖಂಡರು, ಸಾಹಿತಿಗಳು, ಚಿಂತಕರು, ಲೇಖಕರು, ಕನ್ನಡಾಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಿ ಎಲ್ಲರ ಸಲಹೆ ಸೂಚನೆ ಮಾರ್ಗದರ್ಶನದಂತೆ ಸಮ್ಮೇಳನ ಆಯೋಜಿಸುವುದಾಗಿ ತಿಳಿಸಿದರು. ಹೀಗಾಗಿ ಅಂದಿನ ಪೂರ್ವಭಾವಿ ಸಭೆಗೆ ಎಲ್ಲರೂ ಆಗಮಿಸಿ ಸಲಹೆ ಸೂಚನೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪರಿಷತ್ತಿನ ಸದಸ್ಯರಾದ ಬಿ.ಎಂ ರಾವ್, ಡಾ. ಸಂಗಣ್ಣ ಸಿಂಗೆ, ಅರುಣಕುಮಾರ ಹೂಗಾರ, ಡಾ. ಕೃಷ್ಣಾ, ನಿಂಗಣ್ಣ ಪೂಜಾರಿ, ಉಸ್ಮಾನ್ ಚೌದರಿ ಸೇರಿದಂತೆ ಅನೇಕರಿದ್ದರು.