ಬದುಕಿನ ರಂಗಭೂಮಿ ಕಲಾತ್ಮಕವಾಗಿರಲಿ: ಹಾರಕೂಡ ಶ್ರೀ
ಬೀದರ್:ಆ.27: ಮನುಷ್ಯನ ಜನ್ಮ ದೊಡ್ಡ ವಿಸ್ಮಯವೂ ಹೌದು, ಅಮೂಲ್ಯವೂ ಹೌದು ಹಾಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿನ ರಂಗಭೂಮಿ ಕಲಾತ್ಮಕಗೊಳಿಸಿಕೊಳ್ಳಬೇಕು.
ಅವರವರ ಬದುಕಿಗೆ ಅವರೇ ರಂಗಕರ್ಮಿ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2014-15ನೇ ಸಾಲಿನ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ ಗುರುವಂದನೆ, ರಜತ ಕಿರೀಟಧಾರಣೆ ಹಾಗೂ 701ನೇ ತುಲಾಭಾರ ಸೇವೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಗುರುವಾಣಿ ಕರುಣಿಸಿದ ಶ್ರೀಗಳು ಶೈಶವ, ಬಾಲ್ಯ, ತಾರುಣ್ಯ, ಮುಪ್ಪು ಹೀಗೆ ವಿವಿಧ ಸ್ಥರ ವಿನ್ಯಾಸಗಳಲ್ಲಿ ಬೆಳೆಯುವ ಮನುಷ್ಯ ಪ್ರತಿ ಹಂತದಲ್ಲೂ ತಾನು ನಿರ್ವಹಿಸಬೇಕಾದ ಪಾತ್ರ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದರೆ ಮಾತ್ರ ಸಾರ್ಥಕತೆ ಕಾಣಬಹುದಾಗಿದೆ.
ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ, ರಾಷ್ಟ್ರೀಯ ಮೌಲ್ಯಗಳ ಧಾರಣೆ ಹೀಗೆ ವಿವಿಧ ರಂಗಗಳಲ್ಲಿ ಕಲಾತ್ಮಕ ಸಾಧನಾಶೀಲ ವ್ಯಕ್ತಿತ್ವ ಹೊಂದಿರುವುದು ಅತ್ಯವಶ್ಯಕವಾಗಿದೆ.
ಹೆತ್ತ ತಾಯಿಯ ಮಡಿಲಿನಿಂದ ಭೂಮಾತೆಯ ಒಡಲು ಸೇರುವವರೆಗಿನ ನಮ್ಮ ಪಯಣ ಭವ್ಯತೆಯಿಂದ ಕೂಡಿ ಅನ್ಯರಿಗೆ ದಿವ್ಯತೆಯ ಔತಣ ನೀಡುವಂತಿರಬೇಕು.
ವಿದ್ಯೆ, ಬುದ್ಧಿ, ಸಂಸ್ಕಾರ, ಚಾರಿತ್ರ್ಯದ ಅಡಿಪಾಯದ ಮೇಲೆ ಕಟ್ಟಿಕೊಂಡ ಬದುಕಿನ ರಂಗ ಮಂದಿರ ವೈಭವದಿಂದ ಕೂಡಿರುತ್ತದೆ.
ಅಲ್ಪಕಾಲದ ಸೆಳೆತಗಳಿಗೆ ಬಲಿಯಾಗದೆ ಶಾಶ್ವತದ ಮೌಲ್ಯ ಭರಿತ ಜೀವನ ಕ್ರಮ ನಮ್ಮದಾಗಬೇಕು.
ಹಾರಕೂಡ ಸಂಸ್ಥಾನ ಹಿರೇಮಠದಿಂದ ಸಂಚಾಲಿತ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 2014-15ನೇ ಸಾಲಿನ ವಿದ್ಯಾರ್ಥಿಗಳಿಂದ ಏರ್ಪಡಿಸಿದ ಸಮಾರಂಭ, ಅವರಲ್ಲಿರುವ ಗುರು ಭಕ್ತಿ, ಧರ್ಮ ನಿಷ್ಠೆ ಎತ್ತಿ ತೋರಿಸುತ್ತದೆ.
ಆ ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಾತ್ವಿಕ ಕಾಯಕ ಜೀವಿಗಳಾಗಿ ಬಾಳಿನಲ್ಲಿ ಸ್ಥಿರತೆ ಹಾಗೂ ಸಮೃದ್ಧಿ ನೆಲೆಗೊಂಡು ಸುಖ ಜೀವನ ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸಿದರು.
ಶಿವಾನಂದ ಪೂಜಾರಿ ತಡಕಲ್, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಉಮೇಶ ಬರಬಂಡಿ ಹಾಗೂ ಚನ್ನಬಸಪ್ಪ ಮಲಕೂಡ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಭೀಮಶ ಜೋಜನ, ಕಮಲಾಕರ ಧನ್ನುರೆ, ಕಾಮರಾಜ ಬಂಡೆ, ಜ್ಯೋತಿ ಕೆರಗೋಟೆ, ಮಂಜುಳಾ ಹರಕೆ, ಭಾಗ್ಯಶ್ರೀ ಚೌದರಿ, ಲಲಿತಾ ಬೊಂಬಲೆ, ಅಂಜನಾ ಜಮಾದಾರ, ದಾನಮ್ಮ ಜೋಜನ ಮುಂತಾದವರು ಉಪಸ್ಥಿತರಿದ್ದರು.
ಗುರು ಉಗಾಜಿ ಭಿನ್ನವತ್ತಳೆ ವಾಚನ ಮಾಡಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ರಮೇಶ ರಾಜೋಳೆ ಕಾರ್ಯಕ್ರಮವನ್ನು ನಿರೂಪಿಸಿದರು.
ಅನೂಪ ಬಡಾ ವಂದಿಸಿದರು.