ಮಂಡಲಮಟ್ಟದ ಕ್ರೀಡಾಕೂಟ
ಬ್ಯಾಡಗಿ,ಆ.27: ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಪ್ರದರ್ಶಿಸಲು ಕ್ರೀಡಾಕೂಟವು ಒಂದು ಉತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃಧ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದ ಮೈಲಾರ ಮಹದೇವ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಗುಂಡೇನಹಳ್ಳಿ ಮಂಡಲ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತ ಕ್ರೀಡಾಪಟುಗಳಾಗಿ ಸಾಧನೆ ತೋರಬೇಕು ಎಂದು ತಿಳಿಸಿದರು.
ಸ್ಥಳೀಯ ಮುಖಂಡ ನಾಗರಾಜ ಆನ್ವೇರಿ ಮಾತನಾಡಿ, ಕ್ರೀಡಾಪಟುಗಳು ತಾಲೂಕು, ಜಿಲ್ಲಾ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸುವ ಮೂಲಕ ಕೀರ್ತಿ ತರಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಪಾರ್ವತೆಮ್ಮ ನಾಯಕ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ ಅಗಡಿ, ಮುಖಂಡರಾದ ಶಿವಪುತ್ರಪ್ಪ ಅಗಡಿ, ವೀರಬಸಯ್ಯ ಹಾವೇರಿಮಠ, ಮಂಜಪ್ಪ ಎಲಿ, ಪರಮೇಶಪ್ಪ ಮೈಲಾರ, ಸತೀಶ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಪಮ್ಮಾರ, ಮುಖ್ಯಶಿಕ್ಷಕ ಎಸ್.ಎನ್.ಅಮಾತಿ, ಅಣ್ಣಪ್ಪ ಪೀಠದ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.