ಹೊರರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಮೂಲಭೂತ ಸಹಕಾರ ನೀಡಿ
ಧಾರವಾಡ,ಆ27: ಹೊರ ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಕರ್ನಾಟಕ ಸರಕಾರವು ಮೂಲಭೂತ ಸಹಕಾರ ನೀಡಬೇಕೆಂದು ನರಗುಂದ ಭೈರನಟಿ ದೊರೆಸ್ವಾಮಿ ವಿರಕ್ತಮಠದ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಎಲ್ಲ ಕನ್ನಡ ಸಂಘಗಳ ಸಹಯೋಗದಲ್ಲಿ ಆಂಧ್ರಪ್ರದೇಶದ ಆದವಾನಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ ಎರಡು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಭಾಷಾವಾರು ಪ್ರಾಂತ್ಯದ ವಿಂಗಡಣೆಯಾದ ಮೇಲೆ ಕರ್ನಾಟಕದ ಒಂದಿಷ್ಟು ಪ್ರದೇಶಗಳು ಪಕ್ಕದ ರಾಜ್ಯಗಳಿಗೆ ಸೇರಿಕೊಂಡಿವೆ. ಆದರೆ, ಆಂಧ್ರ ಮತ್ತು ಕರ್ನಾಟಕಕ್ಕೆ ಹೊಕ್ಕುಳ ಬಳ್ಳಿಯ ಸಂಬಂಧವಿದೆ, ಇಂದಿಗೂ ಸಹ ಇಲ್ಲಿಯ ಅನೇಕ ಜನರು ಕನ್ನಡ ಸಂಸ್ಕøತಿಯನ್ನೆ ಅನುಸರಿಸುತ್ತಾ ಬಂದಿದ್ದಾರೆ.ತ್ರಿಪದಿ ಮತ್ತು ಚೌಪದಿಯ ಸಾಮಿಪ್ಯ ಈ ನೆಲದಲ್ಲಿ ನಡೆದಿದೆ. ನೆಲ, ಜಲ, ಭಾಷೆಯಲ್ಲಿ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಇದೆ. ಭಾಷೆಗೆ ತೊಂದರೆ ಬಂದರೆ ನಮ್ಮ ಸಂಸ್ಕøತಿಗೆ ತೊಂದರೆ ಬಂದಂತೆ. ನೆಲ-ಜಲದ ವಿಷಯಗಳಲ್ಲಿ ನಾವು ನಿರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಿ ಹೋರಾಟ ಮಾಡಬೇಕು. ಬೇರೆ ಬೇರೆ ಸಂಸ್ಥೆಗಳು ಆಂಗ್ಲ ಭಾಷೆಯ ಶಾಲೆಗಳನ್ನು ತೆರೆಯುವುದರಿಂದ ಕನ್ನಡದ ಅಸ್ಮಿತೆ ಕುಗ್ಗುತ್ತಿದೆ. ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತೆ ಕೇಂದ್ರ ಸರಕಾರಕ್ಕೆ ನಾವೆಲ್ಲರೂ ಒತ್ತಡ ತರಬೇಕು ಎಂದರು.
ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದವಾನಿಯ ಕಲ್ಮಠ ಮಂಡಿಗಿರಿ ಶ್ರೀ ಮ.ನಿ.ಪ್ರ. ಗುರುಸಿದ್ಧದೇವರು ಸಮ್ಮುಖ ವಹಿಸಿದ್ದರು. ಕ.ವಿ.ವ. ಸಂಘದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಂಗೋಲಿ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳಿಯ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಯಗಟಿ ಪ್ರತಾಪ, ಕೆ.ಎಂ. ಮಲ್ಲಿಕಾಜುನಸ್ವಾಮಿ, ದೇಸಾಯಿ ಚಂದ್ರಣ್ಣ ವೇದಿಕೆ ಮೇಲಿದ್ದರು.
ಮಹಾಮೇಳದಲ್ಲಿ ಕೈಗೊಂಡ ನಿರ್ಣಯಗಳು
1 ಕರ್ನಾಟದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಿಗುವ ಎಲ್ಲಾ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಗಡಿನಾಡ ಮತ್ತು ಹೊರನಾಡ ಕನ್ನಡಿಗರಿಗೂ ವಿಸ್ತರಿಸಬೇಕು.
2 ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಪ್ರೌಢಶಾಲೆ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಓದು ಬಯಸಿದರೆ ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ ಕಲ್ಪಿಸಬೇಕು.
3 ಹೊರನಾಡ ಕನ್ನಡ ಶಾಲೆಗಳಲ್ಲಿ ಕನ್ನಡ ಪಠ್ಯ ಪುಸ್ತಕಗಳ ಲಭ್ಯತೆ ಇಲ್ಲದಿರುವುದು ಸಾಮಾನ್ಯವಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈ ಕೊರತೆಯನ್ನು ನೀಗಿಸಲು ಆಯಾ ರಾಜ್ಯ ಸರಕಾರಗಳೊಂದಿಗೆ ಸಮನ್ವಯ ಸಾಧಿಸಬೇಕು ಇಲ್ಲವೆ ಈ ನಿಟ್ಟಿನಲ್ಲಿ ಒಂದು ಸರಕಾರಿ ಸಂಘ ಸ್ಥಾಪಿಸಿ ಅಲ್ಲೆಲ್ಲ ಕನ್ನಡ ಉಳಿಸಲು ಪ್ರಯತ್ನಿಸಬೇಕು.
4 ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಡಿ ಭಾಗಗಳ ರಾಜ್ಯದಿಂದ ಗಡಿ ಭಾಗದವರನ್ನು ಕಡ್ಡಾಯವಾಗಿ ಸದಸ್ಯರನ್ನಾಗಿ ನೇಮಿಸಬೇಕು. ಹಾಗೆಯೇ ಸರಕಾರದಿಂದ ನೀಡುತ್ತಿರುವ ಪ್ರಶಸ್ತಿಗಳ ಆಯ್ಕೆಯಲ್ಲಿಯೂ ಅನುಸರಿಸುವುದು.
ಶಿವಾನಂದ ಭಾವಿಕಟ್ಟಿ ಮಹಾಮೇಳದ ನಿರ್ಣಯಗಳನ್ನು ಮಂಡಿಸಿದರು. ಡಿ. ಸಿದ್ಧನಗೌಡ ಸ್ವಾಗತಿಸಿದರು. ಶಂಕರ ಹಲಗತ್ತಿ ವಂದಿಸಿದರು. ತೇಜಪ್ಪ ನಿರ್ವಹಿಸಿದರು. ಎಂ. ಶಾಂತವೀರ ಮೂರ್ತಿ ನಿರೂಪಿಸಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಹೊರನಾಡ ಮತ್ತು ಒಳನಾಡಿನ ಹಾಗೂ ಸ್ಥಳೀಯ ಕನ್ನಡಿಗರು ಭಾಗವಹಿಸಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಗುರು ಹಿರೇಮಠ, ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ ಇದ್ದರು.