ಕಾಡಬೆಟ್ಟುವಿನಲ್ಲಿನ ಮನೆ ಕಳ್ಳತನ ಪ್ರಕರಣ; ಆರೋಪಿ ಅರೆಸ್ಟ್
ಉಡುಪಿ,ಇತ್ತೀಚೆಗೆ ಕಾಡಬೆಟ್ಟುವಿನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಆರೀಫ್ ಮುನ್ನಾ ಮೊಹಮ್ಮದ್ ಆರೀಫ್ ಬಂಧಿತ ಆರೋಪಿ. ಕಾಡಬೆಟ್ಟು ರಾಮಣ್ಣ ಶೆಟ್ಟಿ ಕಾಲನಿಯ ಜೀವನ ನಗರ ಎಂಬಲ್ಲಿ ಟಿ. ಪ್ರಶಾಂತ್ ಪೈ ಅವರ ನಿವಾಸದಲ್ಲಿ ಇತ್ತೀಚೆಗೆ ಆರೋಪಿ ಕಳವು ಮಾಡಿದ್ದ. ಆರೋಪಿಯು ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನ ಬಳಸಿ ಮುರಿದು ಒಳಗೆ ಪ್ರವೇಶಿಸಿದ್ದ. ಬಳಿಕ ದೇವರ ಫೋಟೋ ಮೇಲಿದ್ದ ಸುಮಾರು ತಲಾ ಒಂದು ಗ್ರಾಂ ತೂಕವಿರುವ ೭ ಚಿನ್ನದ ಲಕ್ಷ್ಮೀ ಪದಕವಿರುವ ಮಾಲೆಯನ್ನು ಕಳವು ಮಾಡಿದ್ದು, ಆತ ಕಳ್ಳತನ ಮಾಡಿದ್ದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ೩೫,೦೦೦ ರೂ. ಆಗಿತ್ತು.
ಪೊಲೀಸರ ವಿಶೇಷ ತಂಡವು ಆ. ೨೪ರಂದು ಆರೋಪಿಯನ್ನು ಉಡುಪಿಯ ಕೃಷ್ಣ ಮಠದ ರಾಜಾಂಗಣದ ಬಳಿ ಬೈಕ್ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ಉಡುಪಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು ೩೫,೯೬೪ರೂ. ಮೌಲ್ಯದ ೫.೪೦೦ ಗ್ರಾಂ ಚಿನ್ನಾಭರಣ ಹಾಗೂ ಕಳವು ಮಾಡಲು ಬಳಸಿದ ಹೀರೋ ಹೊಂಡಾ ಸ್ಪೆಂಡರ್ ಪ್ಲಸ್ ಬೈಕ್ ಮತ್ತು ಕಬ್ಬಿಣದ ರಾಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಆರೋಪಿಯ ವಿರುದ್ಧ ಈಗಾಗಲೇ ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೫ ಕ್ಕೂ ಹೆಚ್ಚಾ ಪ್ರಕರಣಗಳು ದಾಖಲಾಗಿರುತ್ತದೆ.