ಕ್ಯೂಆರ್ ಕೋಡ್ ಆಧಾರಿತ ರೈಲ್ವೆ ಟಿಕೆಟಿಂಗ್ ವ್ಯವಸ್ಥೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.27:– ಕ್ಯೂಆರ್ ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅನಾವರಣಗೊಳಿಸಿದೆ.
ಪ್ರಯಾಣಿಕರು ಸಾಮಾನ್ಯ ವರ್ಗದ ಟಿಕೆಟ್‍ಗಳು ಮತ್ತು ಪ್ಲಾಟ್‍ಫಾರ್ಮ್ ಟಿಕೆಟ್‍ಗಳನ್ನು ಖರೀದಿಸುವ ರೀತಿಯಲ್ಲಿ ಬದಲಾವಣೆ ತಂದಿದ್ದು, ಈ ಸೌಲಭ್ಯ ಈಗ 81 ನಿಲ್ದಾಣಗಳಾದ್ಯಂತ 94 ಅನ್‍ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ ಕೌಂಟರ್‍ಗಳಲ್ಲಿ ಲಭ್ಯವಿದೆ. ಇದು ತಡೆರಹಿತ ಮತ್ತು ಅನುಕೂಲಕರ ಅನುಭವ ನೀಡುತ್ತದೆ.
ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್ ವ್ಯಾಲೆಟ್‍ಗಳು ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆ ಬಳಸಿಕೊಂಡು ಸಲೀಸಾಗಿ ಪಾವತಿ ಮಾಡಬಹುದು. ಇದರಿಂದಾಗಿ ನಿಖರ ಮೌಲ್ಯ ನಿರ್ಧಿಷ್ಟಪಡಿಸುವ ಅಗತ್ಯ ನಿವಾರಣೆ ಮಾಡುವುದು. ಇದಲ್ಲದೆ, 25 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು 12 ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಸ್ಥಾಪಿಸಲಾಗಿದೆ. ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್‍ಗಳು ಮತ್ತು ಪ್ಲಾಟ್‍ಫಾರ್ಮ್ ಟಿಕೆಟ್‍ಗಳನ್ನು ಸುಲಭವಾಗಿ ಖರೀದಿಸಲು ಅನುವು ಮಾಡಿಕೊಡುತ್ತದೆ.
ಟಿಕೆಟ್ ಬುಕಿಂಗ್ ಅನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನಾಲ್ಕು ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ, ಟಿಕೆಟ್ ಬುಕಿಂಗ್‍ಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಸೌಲಭ್ಯವನ್ನೂ ಸಹ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಇದು ಪ್ರಯಾಣಿಕರಿಗೆ ಯುಪಿಐ ಅಪ್ಲಿಕೇಶನ್‍ಗಳ ಮೂಲಕ ಪಾವತಿ ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್‍ಗಳನ್ನು ಸ್ವೀಕರಿಸಲು, ಪ್ರಕ್ರಿಯೆ ಸುಗಮಗೊಳಿಸುತ್ತದೆ.
ಈ ಪ್ರವರ್ತಕ ಉಪಕ್ರಮ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸಚಿವಾಲಯದ ಸಂಘಟಿತ ಪ್ರಯತ್ನಗಳ ಭಾಗವಾಗಿದೆ. ಕ್ಯೂಆರ್ ಕೋಡ್ ಪಾವತಿ ಸೌಲಭ್ಯ ಈಗ ಎಲ್ಲಾ ವಿಭಾಗೀಯ ಅಂಗಡಿಗಳು, ಆಹಾರ ಪ್ಲಾಜಾಗಳು, ಶೌಚಾಲಯಗಳ ಬಳಕೆಗೆ ಪಾವತಿ ಮಾಡಲು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚು ಉಪಯೋಗಕರವಾಗಿದೆ.
ಈ ಬದಲಾವಣೆ ಸುಲಭವಾಗಿದ್ದು ಮತ್ತು ವಹಿವಾಟುಗಳನ್ನು ನಡೆಸಲು ಹೆಚ್ಚು ಅನುಕೂಲಕರವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ತಿಳಿಸಿದರು.