ಆಡಳಿತ ವೇಗಕ್ಕೆ ಚುರುಕು ಮುಟ್ಟಿಸಿದ ಸೆಲ್ವಕುಮಾರ್
ಸಂಜೆವಾಣಿ ನ್ಯೂಸ್
ಮೈಸೂರು: ಆ.27:- ಲೋಕಸಭಾ ಚುನಾವಣೆ, ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ನಾನಾ ಕಾರಣಕ್ಕಾಗಿ ನಿರೀಕ್ಷಿತ ಪ್ರಗತಿ ಸಾಧಿಸದ ಕಾರಣ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಆಡಳಿತದ ವೇಗಕ್ಕೆ ಚುರುಕು ಮುಟ್ಟಿಸಿದರು. ನಗರದ ಜಿಪಂ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪ್ರತಿಯೊಂದು ಇಲಾಖೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು. ಮಾರ್ಚ್ ತಿಂಗಳಿಂದ ಆಗಸ್ಟ್ ತಿಂಗಳ ತನಕ ಆಗಿರುವ ಪ್ರಗತಿಯ ಕುರಿತು ವಿವರಣೆ ಪಡೆಯುತ್ತಲೇ ಉಳಿದ ತಿಂಗಳಲ್ಲಿ ಗುರಿ ತಲುಪುವಂತೆ ಖಡಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 390 ಮನೆಗಳು ಹಾನಿಗೀಡಾಗಿದ್ದು, ಶೇ.75ಕ್ಕಿಂತ ಹೆಚ್ಚು ಹಾನಿಗೀಡಾಗಿರುವ ಮನೆಗಳನ್ನು ಗುರುತಿಸಿ ಹೊಸ ಮನೆಗಳನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿ, ತೋಟಗಾರಿಕೆ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಲು ಪರಿಹಾರ ಪೆÇೀರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಲ್ಯಾಂಡ್ ಬೀಟ್ ಕೆಲಸ ಶೇ.95.85ರಷ್ಟು ಆಗಿದ್ದು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಭೂ ಪ್ರಕರಣಗಳು ಬಾಕಿ ಇರುವುದರಿಂದ ಭೂ ವಿಶೇಷಾಧಿಕಾರಿಗಳ ಹಂತದಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಿ ಇತ್ಯರ್ಥ ಮಾಡಲಾಗುತ್ತಿದೆ. ಇದರಿಂದಾಗಿ ಬೇಗನೆ ಮುಗಿಸುವ ಗುರಿ ಇದೆ ಎಂದರು.
ವಯನಾಡು, ಕೊಡಗು ಭಾಗದಲ್ಲಿ ಹೆಚ್ಚು ಮಳೆ ಬಂದು ಕೆಆರ್‍ಎಸ್, ಕಬಿನಿ ಜಲಾಶಯದಿಂದ ನಿತ್ಯ 2 ಲಕ್ಷ ಕ್ಯೂಸೆಕ್‍ನಷ್ಟು ನೀರು ಹೊರಗೆ ಬಿಟ್ಟಿದ್ದರಿಂದ ಐದು ಗ್ರಾಮಗಳನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರ ತೆರೆಯಲಾಗಿತ್ತು. 390 ಮನೆಗಳು ಹಾನಿಗೀಡಾಗಿದ್ದರೆ, 105 ಎಕರೆ ತೋಟಗಾರಿಕೆ, 402.76 ಎಕರೆ ಕೃಷಿ ಪ್ರದೇಶದ ಬೆಳೆಗಳು ಹಾಳಾಗಿವೆ. ತಂಬಾಕು ಬ್ಯಾರೆಲ್ ಗೋಡೆ ಕುಸಿತ ಕಾರಣ ಮಹಿಳೆಯೊಬ್ಬರು ಮೃತಪಟ್ಟಿದ್ದನ್ನು ಬಿಟ್ಟರೆ ಬೇರೆ ಯಾವ ಪ್ರಕರಣಗಳೂ ನಡೆದಿಲ್ಲ. ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡಲು ಪರಿಹಾರ ಪೆÇೀರ್ಟಲ್‍ನಲ್ಲಿ ದಾಖಲೆಗಳನ್ನು ಅಪ್‍ಲೋಡ್ ಮಾಡುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಭೂ ದಾಖಲೆಗಳ ಅಧಿಕಾರಿ ರಮ್ಯ ಮಾತನಾಡಿ, ಜಿಲ್ಲೆಯಲ್ಲಿ 137 ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, 86 ಪ್ರಾಥಮಿಕ ಅಧಿಸೂಚನೆ, 28 ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದವು ಸರ್ಕಾರದ ಹಂತದಲ್ಲಿ ಪ್ರಸ್ತಾವನೆಗೆ ಹೋಗಿದೆ ಎಂದು ಹೇಳಿದರು.
ದಾಖಲೆಗಳ ಡಿಜಿಟಲೀಕರಣಕ್ಕೆ ಮೈಸೂರು ತಾಲೂಕನ್ನು ಫೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ 1,27,4716 ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕಿದ್ದು, ಮೈಸೂರು ತಾಲೂಕಿನಲ್ಲಿ ಡಿಜಿಟಿಲೀಕರಣ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕೊಳವೆಬಾವಿಗಳನ್ನು ಮುಚ್ಚುವ ಸ್ಥಿತಿಯಲ್ಲಿ ಇಲ್ಲ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎಫ್‍ಟಿಕೆ ಮೂಲಕ 27469 ಟೆಸ್ಟ್‍ಗಳನ್ನು ಮಾಡಿ 15262 ಸ್ಯಾಂಪಲ್ ಪಡೆಯಲಾಗಿದೆ. ಹತ್ತು ಕಡೆಗಳಲ್ಲಿ ಗಡಸುತನದಿಂದ ಕಂಡುಬಂದಿರುವುದನ್ನು ಹೊರತುಪಡಿಸಿದರೆ ಬೇರೆಲ್ಲೂ ನೈಟ್ರೇಟ್ ಕಂಟೆನ್‍ಮೆಂಟ್ ಕಂಡುಬಂದಿಲ್ಲದ ಕಾರಣ ಬೋರ್‍ವೆಲ್ ಮುಚ್ಚುವ ಸ್ಥಿತಿ ಬಂದಿಲ್ಲ ಎಂದು ವಿವರಿಸಿದರು. ಮುಂಗಾರು ಮಳೆಗೂ ಮುನ್ನವೇ ಗ್ರಾಪಂಗಳ ಮೂಲಕ ಕ್ರಮಕೈಗೊಳ್ಳಲಾಗಿತ್ತು. ಮಿನಿ ಟ್ಯಾಂಕ್‍ಗಳು ಇರುವ ಕಡೆಗಳಲ್ಲಿ ಸ್ವಚ್ಛತೆ ಮಾಡಿ ಪೈಪ್‍ಲೈನ್‍ಗೆ ಕಲುಷಿತ ನೀರು ಸೇರದಂತೆ ಮಾಡಲಾಗಿತ್ತು. ಇದರಿಂದಾಗಿ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಡೆಂಗ್ಯು ಜ್ವರ ನಿಯಂತ್ರಣದಲ್ಲಿದೆ. ಲಾರ್ವಾಗಳ ನಾಶಕ್ಕೆ ಅಭಿಯಾನ ಮಾಡಿದ್ದರಿಂದ ಕಂಟ್ರೋಲ್‍ಗೆ ಬಂದಿದೆ. ಕೆಪಿಎಂಎ ಪ್ರಕಾರ ನೋಟಿಸ್ ನೀಡಿ ಆಸ್ಪತ್ರೆಗಳನ್ನು ಪರಿಶೀಲಿಸಲಾಗುತ್ತಿದೆ. ಭ್ರೂಣ ಪತ್ತೆ ಮಾಡುವ ಮತ್ತು ಪರೀಕ್ಷೆ ಮಾಡುವವರ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದರು.
ಜೇನುಕುರುಬ ಸಮುದಾಯ ಆಯ್ಕೆ
ಪಿಎಂ ಜನ್‍ಮನ್ ಯೋಜನೆಗೆ ಕರ್ನಾಟಕದಿಂದ ಕೊರಗ, ಜೇನು ಕುರುಬ ಸಮುದಾಯ ಆಯ್ಕೆಯಾಗಿದ್ದು, ಅದರಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಜೇನು ಕುರುಬ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಮಲ್ಲೇಶ್ ಹೇಳಿದರು. ಜಿಲ್ಲೆಯಲ್ಲಿ 218 ಹಾಡಿಗಳಿದ್ದು, ಅದರಲ್ಲಿ 129 ಹಾಡಿಗಳಲ್ಲಿ 34500 ಜೇನುಕುರುಬರು ವಾಸ ಮಾಡುತ್ತಿದ್ದಾರೆ. ಕಂದಾಯ ಗ್ರಾಮೀಣಾಭಿವೃದ್ಧಿ, ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಒಂಬತ್ತು ಇಲಾಖೆಗಳನ್ನು ಸೇರಿದಂತೆ ಸಮಗ್ರ ಯೋಜನೆ ರೂಪಿಸಿ ಕಳುಹಿಸಲಾಗಿದೆ. ಹಾಡಿಗಳಲ್ಲಿ ಮನೆ ಇಲ್ಲದವರಿಗೆ ಮನೆ, ವಿದ್ಯುತ್ ಸಂಪರ್ಕ,ವಸತಿ ಶಾಲೆ,ಅಂಗನವಾಡಿ ಕೇಂದ್ರ, ಮೊಬೈಲ್ ಯೂನಿಟ್ ಅಥವಾ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಬೇಕಿದೆ ಎಂದು ವಿವರಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಡಿಸಿಎಫ್ ಡಾ.ಬಸವರಾಜು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಜಿಪಂ ಉಪಕಾರ್ಯದರ್ಶಿ ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಮತ್ತಿತರರು ಹಾಜರಿದ್ದರು.