ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಿ: ಜಿ.ಟಿ.ದೇವೇಗೌಡ
ಸಂಜೆವಾಣಿ ನ್ಯೂಸ್
ಮೈಸೂರು: ಆ.27:- ವಿಜಯನಗರ 4ನೇ ಹಂತದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಸರಿಯದ ರೀತಿಯಲ್ಲಿ ಕಸವಿಲೇವಾರಿಯಾಗುತ್ತಿಲ್ಲ. ಸ್ಥಳೀಯ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಶಾಸಕರ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಸವಿಲೇವಾರಿ ಮತ್ತು ಒಳಚರಂಡಿ ದುರಸ್ತಿ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಕೂಡಲೇ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಬಗೆಹರಿಸುವಂತೆ ಮುಡಾ ಆಯುಕ್ತರಿಗೆ ತಿಳಿಸಿದರು.
ವಿಜಯನಗರ 4ನೇ ಹಂತದ ನಿರ್ವಹಣೆಗೆ ಅಗತ್ಯ ಇರುವ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಮುಡಾ ಆಯುಕ್ತ ರಘುನಂದನ್ ತಿಳಿಸಿದರು.
ಹೂಟಗಳ್ಳಿ ನಗರಸಭೆಯ ಪೌರಾಯುಕ್ತರು, ಮುಡಾ ಆಯುಕ್ತರು ಜಂಟಿಯಾಗಿ ಸಭೆ ನಡೆಸಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ವಿಜುಂನಗರ 4ನೇ ಹಂತ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ನೀರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸಲಹೆ ನೀಡಿದರಲ್ಲದೆ, ವಿಜಯನಗರ 4ನೇ ಹಂತಕ್ಕೆ ಅಧಿಕಾರಿಗಳೊಡನೆ ಭೇಟಿ ನೀಡಿ ಪರಿಶೀಲಿಸುವಂತೆ ಆಯುಕ್ತರಿಗೆ ತಿಳಿಸಿದರು.
ದಾಸನಕೊಪ್ಪಲು, ರೂಪನಗರ, ಮರಟಿಕ್ಯಾತನಹಳ್ಳಿ ಒಳಚರಂಡಿ ಸಮಸ್ಯೆ ಬಗೆಹರಿಸಲು ಈಗಾಗಲೇ 25 ಕೋಟಿ ಕ್ರೀಯಾ ಯೋಜನೆ ತಯಾರಾಗಿದ್ದು ಅನುಮೋದನೆ ಹಂತದಲ್ಲಿರುವುದಾಗಿ ಶಾಸಕರು ತಿಳಿಸಿದರು.
ತಾತ್ಕಾಲಿಕವಾಗಿ ಈ ಗ್ರಾಮಗಳ ಒಳಚರಂಡಿ ಸಮಸ್ಯೆ ಬಗೆಹರಿಸಲು ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಶೀಪ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಮಾಡಲು ಸೂಚಿಸಿದರು. ರಾಜಾಜಿನಗರ ಆಶ್ರಯ ಬಡಾವಣೆ ರಸ್ತೆ ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಬೇಕು. ಆಶ್ರಯ ಬಡಾವಣೆಗಳನ್ನು ಪಾಲಿಕೆ ವತಿಯಿಂದ ನಿರ್ಮಾಣ ಮಾಡಿದ್ದು ಪಾಲಿಕೆ ವತಿಯಿಂದ ಅಭಿವೃದ್ಧಿ ಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವಂತೆ ತಿಳಿಸಿದರು.
ಖಾಸಗಿ ಬಡಾವಣೆಗಳಿಗೆ ಕುಡಿಯುವ ನೀರು: ಪ್ರಾಧಿಕಾರದಿಂದ ಅನುಮೋದನೆಗೊಂಡು ನಿರ್ಮಾಣಗೊಂಡಿರುವ ಕೆ.ಬಿ.ಎಲ್ ಬಡಾವಣೆ, ಆಲನಹಳ್ಳಿ, ದಟ್ಟಗಳ್ಳಿಯ ಕಾರ್ತಿಕ ಬಡಾವಣೆ, ಆರ್.ಟಿ.ನಗರದ ನಿವಾಸಿಗಳು ಕುಡಿಯುವ ನೀರನ್ನು ಒದಗಿಸಲು ಮನವಿ ಸಲ್ಲಿಸಿದ್ದು ಈ ಬಡಾವಣೆಗಳಿಗೆ ಪೆÇ್ರೀರೇಟಾ ಪಾವತಿಸಿಕೊಂಡು ಮೀಟರ್ ಅಳವಡಿಸಿ ಕುಡಿಯುವ ನೀರನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮುಡಾ ಆಯುಕ್ತ ರಘುನಂದನ್, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಅಧೀಕ್ಷಕ ಅಬಿಯಂತರರಾದ ಸಿಂಧು, ಮುರುಳಿಧರ್, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು, ರಮ್ಮನಹಳ್ಳಿ ಮುಖ್ಯಾಧಿಕಾರಿ ರವಿಕೀರ್ತಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.