ಕರ್ನಾಟಕ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.27: ಸಾಲ ನೀಡುವುದಾಗಿ ಹೇಳಿ ರೈತರ ಭೂಮಿಯನ್ನು ಬ್ಯಾಂಕಿನ ಹೆಸರಿಗೆ ಆಧಾರ ಮಾಡಿಸಿಕೊಂಡಿದ್ದರೂ ರೈತರಿಗೆ ಸಾಲ ಮಂಜೂರು ಮಾಡದೆ ಸತಾಯಿಸುತ್ತಿರುವ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ನಡೆಯನ್ನು ಖಂಡಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಬ್ಯಾಂಕ್ ಆವರಣದಲ್ಲಿ ಧರಣಿ ನಡೆಸಿ ಪ್ರತಿಭಟಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಗ್ರಾಮೀಣ ಬ್ಯಾಂಕಿನ ಆವರಣಕ್ಕೆ ಆಗಮಿಸಿದ ರೈತಸಂಘದ ಕಾರ್ಯಕರ್ತರು ಸಾಲ ಮಂಜೂರು ಮಾಡದೆ ರೈತನ ಆಸ್ತಿಯನ್ನು ಆಧಾರ ಮಾಡಿಸಿಕೊಂಡಿರುವ ಬ್ಯಾಂಕಿನ ಕಾರ್ಯವೈಕರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮಡುವಿನಕೋಡಿ ಗ್ರಾಮದ ರೈತ ಪ್ರಕಾಶ್ ಎನ್ನುವವರು ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಕೃಷಿ ಸಾಲ ಮತ್ತು ಕೃಷಿ ಅಭಿವೃದ್ದಿ ಸಾಲ ಪಡೆಯಲು ಬಂದಿದ್ದಾರೆ. ಬೆಳೆ ಸಾಲ 4.80 ಲಕ್ಷ ಮತ್ತು ಕೃಷಿ ಅಭಿವೃದ್ದಿ ಸಾಲ 05 ಲಕ್ಷ ಸೇರಿ ಒಟ್ಟು 9.80 ಲಕ್ಷ ರೂ ಸಾಲ ನೀಡುವುದಾಗಿ ಬ್ಯಾಂಕಿನ ವ್ಯವಸ್ಥಾಪಕರು ಪ್ರಕಾಶ್ ಅವರಿಗೆ ಸೇರಿದ ಭೂಮಿಯನ್ನು ಬ್ಯಾಂಕಿಗೆ ಆಧಾರ ಮಾಡಿಸಿಕೊಂಡು ಬೆಳೆ ಸಾಲ 4.80 ಲಕ್ಷ ರೂಗಳ ಹಳೇ ಸಾಲವನ್ನು ರಿನೀವಲ್ ಮಾಡಿದ್ದಾರೆ. ಆದರೆ ಹೊಸದಾಗಿ ನೀಡಬೇಕಾಗಿದ್ದ ಅಭಿವೃದ್ದಿ ಸಾಲ 05 ಲಕ್ಷ ರೂಗಳನ್ನು ರೈತನನ್ನು ನಾಳೆ, ನಾಡಿದ್ದು ಎಂದು ಸಬೂಬು ಹೇಳಿ ಕಳೆದ ಮೂರು ತಿಂಗಳಿನಿಂದ ನಿತ್ಯ ಬ್ಯಾಂಕಿನ ಬಾಗಿಲಿಗೆ ತಿರುಗಾಡಿಸುತ್ತಿದ್ದಾರೆ.
ಆಧಾರ ಮಾಡಿಸಿಕೊಂಡಿದ್ದರೂ ಸಾಲ ನೀಡಲು ಸತಾಯಿಸುತ್ತಿರುವ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕರ ವರ್ತನೆಯ ವಿಚಾರ ತಿಳಿದ ರೈತಸಂಘದ ಕಾರ್ಯಕರ್ತರು ರೈತ ಪ್ರಕಾಶ್ ಜೊತೆಗೂಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕಛೇರಿಗೆ ಆಗಮಿಸಿ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು ಸಾಲ ನೀಡದಿದ್ದ ಮೇಲೆ ರೈತನ ಭೂಮಿಯನ್ನು ಬ್ಯಾಂಕಿನ ಹೆಸರಿಗೆ ಆಧಾರ ಮಾಡಿಸಿಕೊಂಡಿರುವುದಾದರೂ ಏಕೆ? ಎಂದು ಪ್ರಶ್ನಿಸಿದರಲ್ಲದೆ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ರೈತನಿಗೆ ಸಾಲ ಮಂಜೂರು ಮಾಡಬೇಕಲ್ಲದೆ ರೈತನನ್ನು ಅನಗತ್ಯವಾಗಿ ಅಲೆದಾಡಿಸಿರುವ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ದ ಕ್ರಮ ಜರುಗಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಬ್ಯಾಂಕಿನ ಆವರಣದಲ್ಲಿ ಧರಣಿ ಆರಂಭಿಸಿದರು.
ಧರಣಿ ನಿರತರ ಬಳಿಗೆ ಆಗಮಿಸಿದ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ತಾವು ಕಳೆದ ಒಂದು ವಾರದ ಹಿಂದೆ ಬ್ಯಾಂಕಿಗೆ ಬಂದಿದ್ದೇನೆ. ರೈತ ಮಡುವಿನ ಕೋಡಿ ಪ್ರಕಾಶ್ ಅವರ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಆಗಸ್ಟ್ 31 ರೊಳಗೆ ಸಾಲ ಮಜೂರು ಮಾಡುವುದಾಗಿ ಭರವಸೆ ನೀಡಿದರು.
ವ್ಯವಸ್ಥಾಪಕರ ಭರವಸೆಯ ಮೇರೆಗೆ ಧರಣಿ ಹಿಂಪಡೆದ ರೈತರು ಈ ಹಿಂದಿನ ವ್ಯವಸ್ಥಾಪಕರಾದ ಅಮೀದ್ ಮತ್ತು ರವಿ ಅವರ ವಿರುದ್ದ ಕ್ರಮ ಜರುಗಿಸುವಂತೆ ದೂರವಾಣಿಯ ಮೂಲಕ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಿಗೆ ದೂರು ನೀಡಿ ಒತ್ತಾಯಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಸಿಂಧಘಟ್ಟ ಮುದ್ದುಕುಮಾರ್, ಮಡುವಿನಕೋಡಿ ಪ್ರಕಾಶ್, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ನೀತಿಮಂಗಲ ಮಹೇಶ್, ಕಾಗೇಪುರ ಮಹೇಶ್, ಚೌಡೇನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ರೈತರು ಧರಣಿಯಲ್ಲಿದ್ದರು.