ಶ್ರೀಕೃಷ್ಣನ ಮಾನವಪ್ರೇಮ ಸಂದೇಶ ಇಂದಿಗೂ ಪ್ರಸ್ತುತವಾಗಿವೆ
ಸಂಜೆವಾಣಿ ವಾರ್ತೆ
ಚಾಮರಾಜನಗರ:ಆ.27:- ಮನುಷ್ಯರಲ್ಲಿರುವ ಅಹಂ, ಕ್ರೂರತ್ವ ತೊಡೆದುಹಾಕುವಲ್ಲಿ ಶ್ರೀಕೃಷ್ಣನ ಮಾನವಪ್ರೇಮ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿಂದು ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಜಗತ್ತಿನ ಕ್ರೂರತ್ವವನ್ನು ಹೋಗಲಾಡಿಸಲು ಶ್ರೀಕೃಷ್ಣನು ನೀಡಿದ ಮಾನವ ಪ್ರೇಮ ಸಂದೇಶಗಳ ಕೊಡುಗೆ ಅಪಾರವಾಗಿದೆ. ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಜನಜನಿತವಾಗಿವೆ. ಮಹಾಭಾರತದ ಮೂಲಕ ಶ್ರೇಷ್ಠ ಪಾತ್ರಗಳನ್ನು ಪರಿಚಯಿಸಿದ ಶ್ರೀಕೃಷ್ಣನ ಮಾನವ ಕಲ್ಯಾಣದ ಸಂದೇಶಗಳನ್ನು ನಾವೆಲ್ಲರು ಪಾಲಿಸಬೇಕು ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಶ್ರೀಕೃಷ್ಣ ಪ್ರತಿಷ್ಠಾನ ಅಧ್ಯಕ್ಷರಾದ ಸುರೇಶ್ ಋಗ್ವೇದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀಕೃಷ್ಣ ಎಂದರೆ ಪ್ರೇಮ, ಆನಂದ, ಅಕರ್ಷಣೆ ಎಂಬುದಾಗಿದೆ. ಇಡೀ ವಿಶ್ವಕ್ಕೆ ಪುಣ್ಯಭೂಮಿ, ಕರ್ಮಭೂಮಿಯಾಗಿರುವ ಭಾರತದಲ್ಲಿ ಅನೇಕ ಮಹಾನ್ ಪುರುಷರು, ಋಷಿಗಳು, ಸಾಧುಸಂತರು, ದಾರ್ಶನಿಕರು, ತತ್ವಜ್ಞಾನಿಗಳು, ಆಚಾರ್ಯರು, ಚಿಂತಕರು ಕಾಲಕಾಲಕ್ಕೆ ತಮ್ಮದೇ ಆದ ಮೌಲ್ಯಯುತ ಸಂದೇಶಗಳನ್ನು ನೀಡಿ ಮಾನವಕುಲದ ಕಲ್ಯಾಣಕ್ಕೆ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಈ ಪೈಕಿ ಶ್ರೀಕೃಷ್ಣನ ಅವತಾರವು ಒಂದಾಗಿದೆ ಎಂದರು.
ಮಹಾಭಾರತದ ಕೇಂದ್ರಬಿಂದು ಶ್ರೀಕೃಷ್ಣನ ರಾಜತಾಂತ್ರಿಕ ನೀತಿ ಚಿಂತನೆಯೇ ವಿಶೇಷ, ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಮನುಷ್ಯ ದಾರಿ ತಪ್ಪಿದಾಗ, ಸಮುದಾಯದಲ್ಲಿ ಅಶಾಂತಿ ಉಂಟಾದ ಕಾಲಘಟ್ಟದಲ್ಲಿ ಸಮಾಜ ಪರಿವರ್ತಕರಾಗಿ ಬಂದವರು ಶ್ರೀಕೃಷ್ಣ ಜಗತ್ತಿನ ಶ್ರೇಷ್ಠ ಮನಶಾಸ್ತ್ರಜ್ಞ ಎಂದರೆ ತಪ್ಪಾಗಲಾರದು ಎಂದು ಋಗ್ವೇದಿ ಅವರು ತಿಳಿಸಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಹಾಗೂ ನಗರಸಭೆ ಸದಸ್ಯರಾದ ಮಮತ ಅವರು ಮಾತನಾಡಿ ಶ್ರೀಕೃಷ್ಣ ಪ್ರೀತಿ-ಪ್ರೇಮದ ಸಂಕೇತ. ಶ್ರೀಕೃಷ್ಣ ಮಾನವ ಸ್ವರೂಪಿಯಾಗಿ ನಮ್ಮೆಲ್ಲರೂ ಮಾದರಿಯಾಗಿದ್ದಾರೆ.
ಆದರ್ಶ ಸಮಾಜದ ಪ್ರೇರಕಶಕ್ತಿಯಾಗಿರುವ ಶ್ರೀಕೃಷ್ಣನ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಗಾಯಕರಾದ ಜೆ.ಬಿ. ಮಹೇಶ್ ಶ್ರೀಕೃಷ್ಣನ ಕುರಿತ ಗೀತೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್. ಉದಯ್‍ಕುಮಾರ್, ಸಮಾಜದ ಮುಖಂಡರಾದ ಬಾಲಸುಬ್ರಮಣ್ಯಂ, ಇತರರು ಕಾರ್ಯಕ್ರಮದಲ್ಲಿ ಇದ್ದರು.