ಗಾಂಧಿ ಕನಸು ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಾಕಾರ
ವಿಜಯಪುರ.ಆ.೨೭-ಮಹಾತ್ಮಾ ಗಾಂಧೀಜಿ ಅವರು ಕಂಡ ಕನಸಿನ ಗ್ರಾಮ ರಾಜ್ಯದ ಪರಿಕಲ್ಪನೆಯನ್ನು ತಳಹದಿಯನ್ನಾಗಿ ಇಟ್ಟುಕೊಂಡು ೪೨ ವರ್ಷಗಳ ಹಿಂದೆ ಡಾ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದ್ದು, ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ ಎಂಬ ಆಡುಮಾತಿನಂತೆ ಇಂದು ರಾಜ್ಯದ ಹಳ್ಳಿ ಹಳ್ಳಿಗಳಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ತಲೆ ಎತ್ತಿವೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜ್ಞಾನ ಮತ್ತು ವಿಕಾಸ ಸಮನ್ವಯಾಧಿಕಾರಿಗಳಾದ ವಿಜಯಲಕ್ಷ್ಮಿ ತಿಳಿಸಿದರು.
ಇಲ್ಲಿನ ಮಹಾಂತಿನ ಮಠದ ಸಭಾಂಗಣದಲ್ಲಿ ಚೌಡೇಶ್ವರಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಬಿ ಹಡಪದ್ ರವರು ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದು ದೇಶದಲ್ಲಿನ ಎಲ್ಲಾ ನದಿಗಳನ್ನು ಮಹಿಳೆಯರ ಹೆಸರಿನಿಂದಲೇ ಗುರುತಿಸಲಾಗುತ್ತಿದ್ದು, ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ, ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ತಾಯಿಗೆ ಇದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿಯೂ ಮಹಿಳೆಯರ ಪಾತ್ರ ಅಪಾರವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಪರ್ಶ ಆಸ್ಪತ್ರೆಯ ವತಿಯಿಂದ ನೇತೃ ತಪಾಸಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅ. ಶಿ. ವೈ. ನಗರ್ತ ಮಹಂತಿನ ಮಠ ಧರ್ಮಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿ ವಿಶ್ವನಾಥ್, ಸ್ಪರ್ಶ ಆಸ್ಪತ್ರೆಯ ಸಂಜಯ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕರಾದ ಹರೀಶ್ ಗೌq, ಶುದ್ಧಗಂಗಾ ಘಟಕದ ಪ್ರೇರಕರಾದ ಪ್ರಸನ್ನ, ನವೀನ್, ಸೇವಾ ಪ್ರತಿನಿಧಿಗಳಾದ ನೇತ್ರ, ಮಂಜುಳಮ್ಮ, ಅಕ್ಕಯಮ್ಮ ಹಾಗೂ ಚೌಡೇಶ್ವರಿ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಭಾಗವಹಿಸಿದ್ದರು.