ಸಿಎಂ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಕೋಲಾರ,ಆ೨೮:ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯರಿಗೆ ಸದ್ಯ ರಿಲೀಫ್ ನೀಡಿರುವುದು ನ್ಯಾಯಾಲಯ ಹೊರತು ನಾವಲ್ಲ. ಆಗಸ್ಟ್ ೨೯ ರವರೆಗೆ ಉಸಿರಾಡಲು ಅವರಿಗೆ ಅವಕಾಶವಿದೆ. ೨೯ರ ಬಳಿಕ ಬಹುಷಃ ಸಂಕಷ್ಟಕ್ಕೆ ಸಿಲುಕುತ್ತಾರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸೇರಿದಂತೆ ಅವರ ಕುಟುಂಬಸ್ಥರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ. ಜತೆಗೆ ವಾಲ್ಮೀಕಿ ನಿಗಮದ ೧೮೭ ಕೋಟಿರೂ ದುರುಪಯೋಗದ ಪ್ರಕರಣದಲ್ಲಿಯೂ ಸಿಎಂ ಸಿಕ್ಕಿಕೊಳ್ಳುತ್ತಾರೆ. ಹೀಗಾಗಿ ಸಂಕಷ್ಟ ತಪ್ಪಿದ್ದಲ್ಲ ಎಂದರು.
ರಾಜ್ಯಪಾಲರ ಪಕ್ಷಪಾತದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಠಾಣೆಗೆ ಸಾಕಷ್ಟು ದೂರುಗಳು ಬರುತ್ತವೆ. ಇನ್ಸ್‌ಪೆಕ್ಟರ್ ಎಲ್ಲದಕ್ಕೂ ಎಫ್‌ಐಆರ್ ಹಾಕುತ್ತಾರೆಯೇ ? ಯಾವ ಪ್ರಕರಣಕ್ಕೆ ಆದ್ಯತೆ ನೀಡಬೇಕು ಎನ್ನುವುದು ಅವರಿಗೆ ಗೊತ್ತಿರುತ್ತದೆ. ಹಾಗೆಯೇ ರಾಜ್ಯಪಾಲರು ತೀರ್ಮಾನ ಮಾಡಿದ್ದಾರೆ. ಅವರ ಮೇಲೆ ಒತ್ತಡ ಹಾಕಲು ನಾವು ಯಾರು ? ಯಾವ ಕೆಲಸವನ್ನು ಯಾವ ಸಂದರ್ಭಕ್ಕೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ತನಿಖೆಗೆ ಅನುಮತಿ ಕೊಡಬೇಡಿ ಎಂದು ನಾವು ಹೇಳುತ್ತಿಲ್ಲ. ತಪ್ಪು ಮಾಡಿದ್ದರೆ ಬಿಜೆಪಿಯವರ ಮೇಲಯೂ ತನಿಖೆ ಮಾಡಲಿ ನಾವು ಬೇಡ ಎನ್ನುವುದಿಲ್ಲ. ಆದರೆ,೧೮೭ ಕೋಟಿರೂ ಹಣ ದುರುಪಯೋಗದ ವಿಚಾರವಾಗಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅದು, ಕೇವಲ ೮೭ಕೋಟಿ ಎಂದು ಇನ್ನೇನು ಮಾಡಬೇಕು ಎಂದರು.ರಾಜ್ಯ ಸರಕಾರ ಬೀಳುತ್ತದೆ ಎನ್ನುವುದು ಕಾಂಗ್ರೆಸ್ಸಿಗರಿಗೆ ಗ್ಯಾರೆಂಟಿಯಾಗಿದೆ. ಹೀಗಾಗಿ ಶಾಸಕರೇ ತಮ್ಮ ದರವನ್ನು ನಿಗಧಿಪಡಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಜೆಪಿಯವರು ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರಿಗೆ ೫೦ ಕೋಟಿ ಕೊಡುತ್ತಾರೆ ಎಂದು ಹೇಳಿಕಕೊಂಡಿದ್ದರು, ಇದೀಗ ೧೦೦ ಕೋಟಿರೂಗೆ ತಲುಪಿದ್ದಾರೆ.
ಕಾಂಗ್ರೆಸ್‌ನ ಹೈಕಮಾಂಡ್‌ಗೆ ಎಟಿಎಂ ಸರಕಾರ ಇರುವುದು ಕರ್ನಾಟಕದಲ್ಲಿ ಮಾತ್ರ ಬೇರೆಲ್ಲೂ ಇಲ್ಲ. ಇಡೀ ದೇಶವನ್ನು ಸಾಕಬೇಕಿದೆ. ಕರ್ನಾಟಕದ ಹಣದಲ್ಲಿ ದೇಶವನ್ನು ಕಟ್ಟಬೇಕಿದೆ. ಶೂನ್ಯ ಭ್ರಷ್ಟಾಚಾರದ ಆಡಳಿತ ಎಂದು ಹೇಳಿದ್ದ ರಾಹುಲ್ ಗಾಂಧಿ ಇದೀಗ ಎಲ್ಲಿ ಹೋಗಿದ್ದಾರೆ ? ತಲೆಮರೆಸಿಕೊಂಡಿದ್ದಾರಾ ? ಈ ದೇಶದಲ್ಲಿ ಇಲ್ಲವಾ ?ಸಿಎಂ ಸಿದ್ದರಾಮಯ್ಯಗೆ ಪ್ರೋತ್ಸಾಹ ಸೂಚಿಸಿರುವ ಅವರು, ಸಹಾಯ ಮಾಡುವಂತೆ ಶಾಸಕರಿಗೂ ಸೂಚಿಸಿದ್ದಾರೆ. ಇದೆಲ್ಲವೂ ಒಟ್ಟಾರೆ ಭ್ರಷ್ಟಾಚಾರವೇ ಆಗಿದೆ ಎಂದ ಅವರು, ಮುಡಾ ಹಗರಣದಂತೆಯೇ ಪ್ರಿಯಾಂಕ್ ಖರ್ಗೆ ಅವರೂ ಹಗರಣ ನಡೆಸಿದ್ದು ಹೊರತೆಗೆದು ತನಿಖೆಗೆ ಆಗ್ರಹಿಸುತ್ತೇವೆ ಎಂದರು.
ಸಿದ್ದರಾಮಯ್ಯ ಇಳಿದ ತಕ್ಷಣ ಸಿಎಂ ಯಾರಾಗುತ್ತಾರೆ ಎನ್ನುವುದಕ್ಕಿಂತಲೂ ಅವರ ಪಕ್ಷ ಅಧಿಕಾರದಲ್ಲಿ ಇರುತ್ತದೆಯೇ ಎನ್ನುವುದನ್ನು ಮೊದಲು ಯೋಚಿಸಬೇಕಿದೆ. ಸದ್ಯ ೧೩೬ ಶಾಸಕರು ಇರುವುದೇ ಅವರಿಗೆ ದೊಡ್ಡ ಸಮಸ್ಯೆ. ಮುಖ್ಯಮಂತ್ರಿ ಆಗಬೇಕೆನ್ನುವವರು ಈಗಾಗಲೇ ಒಂದು ಡಜನ್ ಇದ್ದಾರೆ.
ಎಷ್ಟು ಜನರನ್ನು ಸಿಎಂ ಮಾಡಲು ಸಾಧ್ಯ. ಈಗಾಗಲೇ ಕೆಲವರು ಬಟ್ಟೆ ಹೊಲಿಸಿಕೊಂಡಿದ್ದಾರೆ, ಮನೆಗಳಿಗೆ ಸುಣ್ಣ ಬಣ್ಣ ಬಳಿಸುತ್ತಿದ್ದಾರೆ, ಹೈಕಮಾಂಡ್ ಬಳಿ ಕೆಲವರು ಇದ್ದಾರೆ, ಇಲ್ಲಿ ಕೆಲವರು ಇದ್ದಾರೆ, ಸಿದ್ದರಾಮಯ್ಯ ಬದಲಿಗೆ ಯಾರನ್ನು ಮಾಡಬೇಕೆಂಬ ಚಿಂತನೆಯಲ್ಲೂ ಹೈಕಮಾಂಡ್ ಇದೆ. ಆದರೆ ಎಲ್ಲರೂ ನಾನು ನಾನು ನಾನು ಎಂದು ಸಿದ್ಧವಾಗಿದ್ದರೆ ಹೇಗೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕ ಬಂದ ಬಳಿಕ ಸುಲಿಗೆ ಹೆಚ್ಚಾಗಿದೆ. ಎಲ್ಲ ಜೈಲುಗಳು ರೆಸಾರ್ಟ್‌ಗಳಾಗಿವೆ. ಸೆರೆಮನೆಗಳು ಅರಮನೆಗಳಾಗಿವೆ. ಜೈಲಿನ ಭ್ರಷ್ಟ ಮಹಿಳಾ ಸೂಪರ್‍ಡೆಂಟ್ ಹೊಸ ಮನೆ ನಿರ್ಮಿಸುತ್ತಿದ್ದು, ಅದರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿರುವವರಿಗೆ ಜೈಲಿನಲ್ಲಿ ರಾಜಾತೀಥ್ಯ ಸಿಗುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಇದನ್ನು ಕೂಡಲೇ ಗೃಹಸಚಿವರು, ಮುಖ್ಯಮಂತ್ರಿ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ ಮತ್ತಿತರರಿದ್ದರು.