ಅಪೂರ್ಣ ಜಿಲ್ಲಾ ರಂಗಮಂದಿರ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ನೀಡಲು ಕ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ, ಆ.೨೭;; ದಾವಣಗೆರೆ ನಗರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರೂ.4 ಕೋಟಿ ಅನುದಾನದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದ್ದು ಪೂರ್ಣಗೊಳಿಸಲು ಅನುದಾನದ ಕೊರತೆಯಾಗಿದೆ. ರಂಗಮಂದಿರ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಇಲಾಖೆಯಲ್ಲಿನ ಅನುದಾನ ಬಳಕೆ ಮಾಡಿಕೊಳ್ಳಲು ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ; ಶಮ್ಲಾ ಇಕ್ಬಾಲ್ ತಿಳಿಸಿದರು. ಅವರು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2013 ರಲ್ಲಿ ರೂ.4.34 ಕೋಟಿ ಅನುದಾನದಲ್ಲಿ ಜಿಲ್ಲಾ ರಂಗಮಂದಿರದ ನಿರ್ಮಾಣ ಆರಂಭವಾಗಿದ್ದು ಅನುದಾನದ ಕೊರತೆಯಿಂದ ಪೂರ್ಣವಾಗಿರುವುದಿಲ್ಲ, ಈಗ ಹೆಚ್ಚುವರಿಯಾಗಿ ರೂ.4 ಕೋಟಿಯಷ್ಟು ಅನುದಾನ ಅವಶ್ಯಕತೆ ಇದೆ. ಈ ರಂಗಮಂದಿರ ನಿರ್ಮಾಣ ವಾದಲ್ಲಿ ದಾವಣಗೆರೆ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಉಳಿತಾಯವಾದ ಅನುದಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಉಳಿದಿರುವ ಅನುದಾನ ಬಳಕೆ ಮಾಡಿಕೊಂಡು ಅಪೂರ್ಣವಾಗಿರುವ ರಂಗಮಂದಿರವನ್ನು ನಿರ್ಮಾಣ ಮಾಡಬಹುದಾಗಿದ್ದು ಇದಕ್ಕೆ ಸರ್ಕಾರದ ಅನುಮತಿ ಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉಸ್ತುವಾರಿ ಕಾರ್ಯದರ್ಶಿಯವರು ವಿವರವಾದ ಪ್ರಸ್ತಾವನೆಯನ್ನು ವರದಿಯೊಂದಿಗೆ ನೀಡಲು ತಿಳಿಸಿದರು.  ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 366536 ಮಹಿಳೆಯರು ನೊಂದಾಯಿಸಿದ್ದು ಇದರಲ್ಲಿ ಜೂನ್‍ನಲ್ಲಿ 358289 ಮಹಿಳೆಯರಿಗೆ ಸಹಾಯಧನ ಪಾವತಿಸಲಾಗಿದೆ. ಜಿಎಸ್‍ಟಿ ಹಾಗೂ ಇತರೆ ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ ಹಣ ಪಾವತಿಯಾಗದಿದ್ದಲ್ಲಿ ಸರಿಪಡಿಸಲು ಸೂಚನೆ ನೀಡಿ ಜಿಲ್ಲೆಯಲ್ಲಿ ಗ್ರಾಮಾಂತರ 1771 ಹಾಗೂ 391 ನಗರ, ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಿದ್ದು ಈ ಎಲ್ಲಾ ಕೇಂದ್ರಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇರುವಂತೆ ನೋಡಿಕೊಂಡು ಖಾಸಗಿ ಬಾಡಿಗೆ ಕಟ್ಟಡವಾಗಿದ್ದರೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಳ್ಳಲು ಸೂಚನೆ ನೀಡಿ ಅಧಿಕ ಮಳೆಯಿಂದ ಹಾನಿಯಾಗಿರುವ ಕಟ್ಟಡಗಳ ದುರಸ್ಥಿಗೆ ಛಾಯಾಚಿತ್ರಗಳೊಂದಿಗೆ ವರದಿಯನ್ನು ನೀಡಲು ತಿಳಿಸಿ ದಾವಣಗೆರೆ ನಗರದಲ್ಲಿ ಕರ್ತವ್ಯ ನಿರತ ಮಹಿಳಾ ವಸತಿ ನಿಲಯದ ಅವಶ್ಯಕತೆ ಇದ್ದು ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.