ಪೂಜ್ಯ ಡಾ.ಅಪ್ಪಾ ಅವರು ವಿಜ್ಞಾನ ಕಾಲೇಜುಗಳನ್ನು ಆರಂಭಿಸಿ ದೊಡ್ಡ ಕೊಡುಗೆ ನೀಡಿದ್ದಾರೆ
ಕಲಬುರಗಿ:ಆ.26:ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ತಮ್ಮ ಸಂಸ್ಥಾನದಲ್ಲಿ ಅನೇಕ ವಿಜ್ಞಾನ ಕಾಲೇಜುಗಳನ್ನು ಆರಂಭಿಸಿ ಈ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಕೃಷ್ಣರೆಡ್ಡಿ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಯ ಬೆಳವಣಿಗೆ ಎಂಬ ವಿಷಯ ಕುರಿತು ಮಾತನಾಡಿದರು.
ಪೂಜ್ಯ ದೊಡ್ಡಪ್ಪ ಅಪ್ಪ ಅವರು 1934 ರಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿ ಶಿಕ್ಷಣದ ಜೊತೆಗೆ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತೆಯನ್ನು ತಿಳಿಸಿದರು. ಅದರಂತೆ ಪೂಜ್ಯ ಡಾ.ಅಪ್ಪ ಅವರು ತಮ್ಮ ಸಂಸ್ಥೆಯಲ್ಲಿ ವಿಜ್ಞಾನ ವಿಷಯಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಮತ್ತು ಬದುಕಿಗೆ ಅದರ ಪ್ರಾಮುಖ್ಯತೆ ತಿಳಿಯುವಂತೆ ಮಾಡಿದರು. ವಿಜ್ಞಾನ ಕೋರ್ಸು ಒಳಗೊಂಡಿರುವ ಪದವಿಪೂರ್ವ ಶಿಕ್ಷಣಗಳು, ಪದವಿ ಶಿಕ್ಷಣಗಳು ಮತ್ತು ಇಂಜಿನಿಯರಿಂಗ್ ಶಿಕ್ಷಣಗಳನ್ನು ಪೂಜ್ಯರು ಆರಂಭಿಸಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನದ ಮಹತ್ವ ಬಹಳಷ್ಟಿದೆ ಎಂಬುದನ್ನು ಮನಗಂಡು ಪೂಜ್ಯರು ವಿಜ್ಞಾನ ಬೆಳೆಯುವುದಕ್ಕೆ ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಳವನ್ನು ತಿಳಿಸುವುದಕ್ಕೆ ಬಹಳ ಶ್ರಮಿಸುತ್ತಿದ್ದಾರೆ. ಅದರಂತೆ ಈ ಸಂಸ್ಥೆಯಲ್ಲಿ ವಿಜ್ಞಾನ ವಿಷಯ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸಂಶೋಧಕರಾಗಿ, ವೈದ್ಯರಾಗಿ, ತಂತ್ರಜ್ಞಾನರಾಗಿ, ಇಂಜಿನಿಯರ್ಸ್ ಗಳಾಗಿ ಸೇವೆ ಮಾಡುತ್ತಿದ್ದಾರೆ ಅದಕ್ಕೆ ಮುಖ್ಯ ಕಾರಣ ವಿಜ್ಞಾನ. ಪೂಜ್ಯ ಅಪ್ಪ ಅವರು ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಿದ್ದಾರೆ. ಅಪ್ಪಾ ಇಂಜಿನಿಯರಿಂಗ್, ಮಹಿಳೆಯರಿಗಾಗಿಯೇ ಗೋದುತಾಯಿ ಇಂಜಿನಿಯರಿಂಗ್, ಸುರಪುರದಲ್ಲಿ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಮತ್ತು ಬೀದರನಲ್ಲಿ ಲಿಂಗರಾಜಪ್ಪ ಇಂಜಿನಿಯರಿಂಗ್ ಕಾಲೇಜ್ ಆರಂಭಿಸಿದ್ದಾರೆ. ಕಾಲೇಜಿನಲ್ಲಿ ಗ್ರಂಥಾಲಯಗಳಲ್ಲಿ ಸಾವಿರಾರು ವಿಜ್ಞಾನದ ಪುಸ್ತಕಗಳನ್ನು ವಿದ್ಯಾರ್ಥಿಗಳ ಓದಿಗಾಗಿ ಒದಗಿಸಿದ್ದಾರೆ. ಪ್ರತಿ ವರ್ಷ ವಿಜ್ಞಾನ ಕಾಲೇಜುಗಳು ವಿಜ್ಞಾನ ವಸ್ತುಪ್ರದರ್ಶನ ಮಾಡುವುದರಿಂದ ವಿಜ್ಞಾನ ಮಹತ್ವವನ್ನು ಸಾರುತ್ತಿವೆ ಮತ್ತು ತಿಳಿ ಹೇಳುತ್ತಿವೆ ಇದಕ್ಕೆಲ್ಲ ಮುಖ್ಯ ಕಾರಣ ಪೂಜ್ಯ ಡಾ.ಅಪ್ಪಾ ಮತ್ತು ಡಾ.ಅವ್ವಾಜಿಯವರ ಹಗಲಿರುಳು ಶೈಕ್ಷಣಿಕ ಚಿಂತನೆ. ಅದೇ ರೀತಿ ಮಕ್ಕಳಲ್ಲಿ ವೈಜ್ಞಾನಿಕ ಬೆಳವಣಿಗೆಗೆ ಸಂಸ್ಥೆ ಬಹಳ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.