ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ:ಹೆಸರು ಕಾಳು ಖರೀದಿಗೆ ನಿರ್ಧಾರ
ಕಲಬುರಗಿ:ಆ.26: ಪ್ರಸಕ್ತ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹೆಸರು ಮತ್ತು ಸೂರ್ಯಕಾಂತಿ ಕೃಷಿ ಉತ್ಪನ್ನ ಖರೀದಿಗೆ ಸರ್ಕಾರ ಆದೇಶಿಸಿರುವುದರಿಂದ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಹೆಸರು ಕಾಳು ಖರೀದಿಗೆ ನೋಂದಣಿ ಆರಂಭಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜಿಲ್ಲೆಯಲ್ಲಿ ಸೂರ್ಯಕಾಂತ ಬೆಳೆ ಮಾರುಕಟ್ಟೆಗೆ ಇನ್ನು ಬಂದಿರುವುದಿಲ್ಲ. ಹೀಗಾಗಿ ಸದ್ಯಕ್ಕೆ ಸೂರ್ಯಕಾಂತಿ ಖರೀದಿ ಮಾಡುತ್ತಿಲ್ಲ. ಒಂದೊಮ್ಮೆ ಮಾರುಕಟ್ಟೆಗೆ ಸೂರ್ಯಕಾಂತಿ ಪ್ರವೇಶಿಸಿದಲ್ಲಿ ಅದನ್ನು ಖರೀದಿಸಲು ಸಭೆಯು ತೀರ್ಮಾನಿಸಿದೆ.
ಹೆಸರು ಕಾಳು ಖರೀದಿಗೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿಯನ್ನು ಕಲಬುರಗಿ ಜಿಲ್ಲೆಗೆ ನೋಡಲ್ ಏಜೆನ್ಸಿಯನ್ನಾಗಿ ನೇಮಿಸಿದ್ದು, ಜಿಲ್ಲೆಯಲ್ಲಿ ಈ ಹಿಂದೆ ಪರಿಣತಿ ಹೊಂದಿದ 162 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ರೈತ ಉತ್ಪಾದಕ ಸಂಘಗಳನ್ನು ಗುರುತಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇಲ್ಲಿ ರೈತರ ನೊಂದಣಿ ಕಾರ್ಯ ನಡೆಯಲಿದೆ.
ಹೆಸರು ಕಾಳು ಖರೀದಿಗೆ ಆಗಸ್ಟ್ 26 ರಿಂದ ಸೆಪ್ಟೆಂಬರ್ 9ರ ವರೆಗೆ ನೋಂದಣಿ ನಡೆಯಲಿದ್ದು, ಆಗಸ್ಟ್ 28 ರಿಂದ ಖರೀದಿ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ರೈತ ಬಾಂಧವರು ಇದರ ಲಾಭ ಪಡೆಯಬೇಕೆಂದು ಡಿ.ಸಿ. ಅವರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಉಪನಿರ್ದೆಶಕ ಸಂತೋಷ ಇನಾಂದಾರ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಸಹಾಯಕ ನಿರ್ದೇಶಕ ವಿಶಾಲ, ಎ.ಪಿ.ಎಂ.ಸಿ ಜಂಟಿ ನಿರ್ದೇಶಕ ಅಲ್ಲಾಭಕ್ಷ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದ್ದರು.