ಹಿರಿಯರು ಸಮಾಜದ ಕಣ್ಣುಗಳಿದ್ದಂತೆ
ಲಕ್ಷ್ಮೇಶ್ವರ,ಆ.26: ಕಿರಿಯರ ಭವಿಷ್ಯದ ಏಳ್ಗೆಗಾಗಿಯೇ ತಮ್ಮನ್ನೇ ಸಮರ್ಪಿಸಿಕೊಂಡ ತಂದೆ-ತಾಯಿಗಳು ಮತ್ತು ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು. ಅವರ ಅನುಭವ, ಮಾರ್ಗದರ್ಶನ ಸಮಾಜಕ್ಕೆ ದಾರಿದೀಪ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಸೋಮೇಶ್ವರ ಇಂಡಸ್ಟ್ರೀಜ್ ಆವರಣದಲ್ಲಿ ಲಕ್ಷ್ಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ನಡೆದ ಸಂಸದರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿರಿಯರು ಸಮಾಜದ ಕಣ್ಣುಗಳಿದ್ದಂತೆ. ಅವರು ನೀಡಿದ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳು ಬದುಕಿಗೆ ಮೂಲಾಧಾರವಾಗಿವೆ. ಹಿರಿಯರು, ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಿದ ಪಂಚಮಸಾಲಿ ಸಮಾಜದ ಕಾರ್ಯ ಶ್ಲಾಘನೀಯ. ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡ ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಸ್ವಾಭಿಮಾನ, ಸಂಘಟನೆ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆಗಳೆಂಬ ಉದಾತ್ತ ತತ್ವಗಳನ್ನು ಹೊಂದಿ ಇತರೇ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಇತರೇ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
“ಲಕ್ಷ್ಮೇಶ್ವರ, ಶೀರಹಟ್ಟಿ ಭಾಗದ ಜನತೆಗೆ ನನ್ನ ಕೋಟಿ ನಮನ. ಅವರ ಋಣ ತೀರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಮುಖ್ಯವಾಗಿ ಈ ಭಾಗದ ಜನರ ಮುಖ್ಯ ಬೇಡಿಕೆ ಗದಗ-ಯಲವಗಿ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಮೊದಲ ಹಂತದ 150 ಕೋಟಿ ರೂ ಮೀಸಲಿರಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕ್ಯಗೊಳ್ಳಲು ಮನವಿ ಮಾಡಿದ್ದೇನೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿಯಾಗಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಮಾಜಿ ಸಚಿವ, ಶಾಸಕ ಸಿ.ಸಿ ಪಾಟೀಲ ಮಾತನಾಡಿ, ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಎಲ್ಲರ ಮಂತ್ರವಾಗಬೇಕು. ಹಿರಿಯರನ್ನು ಗೌರವಿಸುವುದು ನಮ್ಮ ನಾಡಿನ ಸಂಪ್ರದಾಯ, ಸಂಸ್ಕಾರವಾಗಿದೆ. ಸಮಾಜ ನಮಗೇನು ಮಾಡಿದೆ ಎನ್ನುವದಿಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನೂ ಎಂಬ ಆತ್ಮ ವಿಮರ್ಶೆ ನಮ್ಮೆಲ್ಲರ ಆಧ್ಯತೆಯಾಗಬೇಕು. ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೂ ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಮಸಾಲಿ ಸಮಾಜ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಅವರು ಸಮಾಜ ಸಂಘಟನೆಯ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಈ ವೇಳೆ ವೈದ್ಯರತ್ನ ಪುರಸ್ಕೃತ ಡಾ.ಶ್ರೀಕಾಂತ ಕಾಟೇವಾಲೆ, ಕಾಯಕರತ್ನ ಡಾ. ಪೂರ್ಣಾಜಿ ಖರಾಟೆ ಸೇರಿ ಹಿರಿಯರು, ರೈತರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಪಂಚಮಸಾಲಿ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ಮಾಗಡಿ, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಿ.ಬಿ ಬಳಿಗಾರ, ಸಣ್ಣವೀರಪ್ಪ ಹಳೆಪ್ಪನವರ, ಗುರುನಾಥ ದಾನಪ್ಪನವರ, ಎಂ.ಆಯ್ ಮುಳಗುಂದ, ಸಿ.ಆರ್ ಲಕ್ಕುಂಡಿಮಠ, ಸಿ.ಜಿ ಹಿರೇಮಠ, ಜಿ.ವಿ ಪಾಟೀಲ, ಅಶೋಕ ಪಲ್ಲೇದ, ಸರೋಜಕ್ಕ ಬನ್ನೂರ, ಎನ್.ವಿ ಹೇಮಗಿರಿಮಠ, ನಿಂಗಪ್ಪ ಬನ್ನಿ. ಸಿ.ವಿ ಕೋಲಕಾರ, ಶಕುಂತಲಾ ಅಳಗವಾಡಿ, ಡಿ.ವೈ ಹುನಗುಂದ. ಈರಣ್ಣ ಕಟಗಿ, ಎಸ್.ಎನ್ ಅಂಬಿಗೇರ ಸೇರಿ ಅನೇಕರು ಹಾಜರಿದ್ದರು.
ನಾಗರಾಜ ಕುಲಕರ್ಣಿ ಸ್ವಾಗತಿಸಿದರೆ, ಮೆಹಬೂಬ್ ಹುಸೇನ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶೈಲಾ ಆದಿ ವಂದಿಸಿದರು.