ಶ್ರೀ ಕೃಷ್ಣ ಜನ್ಮಾಷ್ಟಮಿ: ವೇಷಭೂಷಣ ಸ್ಪರ್ಧೆ
ಬ್ಯಾಡಗಿ,ಆ26: ಶ್ರೀಕೃಷ್ಣ ಜನ್ಮಾಷ್ಟಮಿಯು ಮಹಾವಿಷ್ಣುವಿನ ದಶವತಾರಗಳಲ್ಲಿ ಒಂದಾದ ಕೃಷ್ಣಾವತಾರದ ಜನ್ಮ ಸ್ಮರಣಾರ್ಥ ಆಚರಿಸುವ ಹಬ್ಬವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕು. ಸುರೇಖಾಜಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಮಕ್ಕಳ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ ವಿವಿಧ ಹೆಸರುಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯು ಪ್ರಸಿದ್ಧಿ ಪಡೆದಿದೆ. ಕೃಷ್ಣನು ಜನಿಸಿದ ಈ ಶುಭದಿನವನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣಾಷ್ಟಮಿಯಂದು ಸೌರಮಾನ ರೀತಿಯಲ್ಲಿ ಸಿಂಹ ಮಾಸದ ರೋಹಿಣೀ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯು ಶ್ರೀಕೃಷ್ಣನ ಜನನ ದಿನವಾಗಿದೆ ಎಂದು ತಿಳಿಸಿದರು.
ಶಿಗ್ಗಾಂವಿ ಸೇವಾ ಕೇಂದ್ರದ ಮುಖ್ಯಸ್ಥರಾದ ಬಿ.ಕೆ.ಭಾರತಿ ಅಕ್ಕನವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲು ಮೀಸಲಾಗಿರುವ ದಿನವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಬೆಣ್ಣೆ ಕಳ್ಳ ಕೃಷ್ಣನು ಜನಿಸಿದ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯನ್ನು ಸಂಭ್ರಮಿಸುವ ನಾವೆಲ್ಲರೂ ಧರ್ಮ ರಕ್ಷಕ ಕೃಷ್ಣ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸಿನ ದಾರಿಯು ಸುಗಮವಾಗುತ್ತದೆ. ಗೋಪಾಲನ ಈ ಮಾತುಗಳು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಸದಾ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ರಾಜ್ಯ ಎಸ್ಸಿ.ಎಸ್ಟಿ. ಆಯೋಗದ ಮಾಜಿ ಅಧ್ಯಕ್ಷ ನೆಹರೂ ಓಲೇಕಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ರೋಟರಿ ಕ್ಲಬ್ಬಿನ ಅಧ್ಯಕ್ಷ ಎಸ್.ಎಂ. ಬೂದಿಹಾಳಮಠ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಇನ್ನರ್ವಿಲ್ ಕ್ಲಬ್ಬಿನ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ರೋಟರಿ ಕ್ಲಬ್ ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ವೀರೇಶ ಬಾಗೋಜಿ, ಬಸವರಾಜ ಸುಂಕಾಪುರ, ಚಂದ್ರಶೇಖರ ಗಾಣಿಗೇರ, ಇನ್ನರ್ ವ್ಹೀಲ್ ಕ್ಲಬ್ ಸದಸ್ಯರಾದ ಸುಮಾ ಸುಂಕಾಪುರ, ಲಕ್ಷ್ಮಿ ಉಪ್ಪಾರ, ಪ್ರತಿಭಾ ಮೇಲಗಿರಿ, ಪುಷ್ಪ ಇಂಡಿಮಠ, ಸಂಧ್ಯಾರಾಣಿ ದೇಶಪಾಂಡೆ, ಶೋಭಾ ನೋಟದ, ರೂಪಾ ಕಡೆಕೊಪ್ಪ, ಇನ್ನಿತರರು ಉಪಸ್ಥಿತರಿದ್ದರು.
ವೇಷ ಭೂಷಣ ಸ್ಪರ್ಧೆಯಲ್ಲಿ 80 ಮಕ್ಕಳು ಭಾಗವಹಿಸಿದ್ದು, ಎಲ್ಲ ಮಕ್ಕಳಿಗೂ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.