ಯೋಗಕ್ಕೆ ಇನ್ನಷ್ಟು ಉದ್ಯಾನವನಗಳು: ರಮೇಶ್‌ ಗುಪ್ತ ಭರವಸೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಅ2:  ‘ರಾಮರಾಜ್ಯದ ಪರಿಕಲ್ಪನೆ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯ. ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವ ಯೋಗವೂ ರಾಮರಾಜ್ಯದತ್ತ ನಮ್ಮನ್ನು ಕೊಂಡೊಯ್ಯುವ ಸಾಧನಗಳಲ್ಲಿ ಒಂದು. ಇಂತಹ ಯೋಗ ಸಾಧನೆಗಾಗಿ ನಗರದ ಇನ್ನಷ್ಟು ಉದ್ಯಾನಗಳನ್ನು ಒದಗಿಸಲು ಸಿದ್ಧ’ ಎಂದು ಹೊಸಪೇಟೆ ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಹೇಳಿದರು.
ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪತಂಜಲಿ ಯೋಗ ಸಮಿತಿ, ಜನನಿ ವಿವಿಧೋದ್ದೇಶ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಮಹಾತ್ಮ ಗಾಂಧಿ, ಲಾಲ್‌ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಗಾಂಧಿ, ಶಾಸ್ತ್ರೀಜಿ ಸಹಿತ ಹಲವಾರು ಹೋರಾಟಗಾರರ ನಿಸ್ವಾರ್ಥ ತ್ಯಾಗ,  ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅದು ಸ್ವೇಚ್ಛೆಯಾಗದಂತೆ ನಾವು ನೋಡಿಕೊಳ್ಳಬೇಕಿದೆ. ಮಕ್ಕಳಿಗೆ  ಉತ್ತಮ ಸಂಸ್ಕಾರ ಕಲಿಸಬೇಕಿದೆ. ರಾಮರಾಜ್ಯದ ಕನಸು ನನಸಾಗಲು ನಮ್ಮೆಲ್ಲರ ಕೊಡುಗೆಯೂ ಅಗತ್ಯವಾಗುತ್ತದೆ’ ಎಂದು ಅವರು ಹೇಳಿದರು.
ಉದ್ಯಾನಗಳ ಪಟ್ಟಿ ಕೊಡಿ: ‘ನಿತ್ಯ ಯೋಗ ಮಾಡಲು  ಅಗತ್ಯವಾಗಿರುವ  ಉದ್ಯಾನಗಳ ಪಟ್ಟಿಯನ್ನು ಕೊಡಿ, ಅಲ್ಲಿ ಅಗತ್ಯದ ಸೌಲಭ್ಯ ಸಹಿತ ನಗರಸಭೆಯಿಂದ ಠರಾವು ಅಂಗೀಕರಿಸಿ ಒಪ್ಪಿಗೆ ಕೊಡಿಸುವ ಕೆಲಸ ಮಾಡಲಾಗುವುದು. ಫ್ರೀಡಂ ಪಾರ್ಕ್‌ನ ಇನ್ನೊಂದು ಭಾಗದಲ್ಲಿ ಈಗಾಗಲೇ ಯೋಗ ಪ್ರತಿಮೆಗಳ ಸಹಿತ ಉದ್ಯಾನ ಸಜ್ಜಾಗುತ್ತಿದ್ದು, ಅದರ ಹುಲ್ಲುಹಾಸು, ದೀಪದ ಬೆಳಕಿಗೆ ಉಂಟಾಗುವ ಅನುದಾನ ಕೊರತೆಯನ್ನು ತುಂಬಿಕೊಡುವ ನಿಟ್ಟಿನಲ್ಲೂ ನಗರಸಭೆಯ ವತಿಯಿಂದ ಅನುದಾನ ಹೊಂದಿಸಲು ಒಟ್ಟಾಗಿ ಶ್ರಮಿಸಲಿದ್ದೇವೆ’ ಎಂದು ರಮೇಶ್ ಗುಪ್ತ ಭರವಸೆ ನೀಡಿದರು.
ಸಚಿವ ಆನಂದ್ ಸಿಂಗ್ ಅವರ ಪರಿಕಲ್ಪನೆಯ ಫ್ರೀಡಂ ಪಾರ್ಕ್‌ ಇಂದು ನಗರದ ಹೆಗ್ಗುರುತಾಗಿದೆ. ಅವರಿಗೆ ನಮ್ಮೆಲ್ಲರ ಅಭಿನಂದನೆ ಸಲ್ಲಬೇಕು ಎಂದ ರಮೇಶ್ ಗುಪ್ತ, ತಮ್ಮ ರಾಜೀವ್ ನಗರ ವಾರ್ಡ್‌ನಲ್ಲಿರುವ ನಾಲ್ಕೂ ಉದ್ಯಾನಗಳನ್ನು ತಾವು ಅಭಿವೃದ್ಧಿಪಡಿಸಿದ್ದನ್ನು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯುದ ಪ್ರಾಧ್ಯಾಪಕರೂ ಆಗಿರುವ ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್‌.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಉಪವಾಸದಿಂದ ಮನುಷ್ಯನ ದೇಹ, ಮನಸ್ಸಿನ ಸ್ವಾಸ್ಥ್ಯ ಕಾಪಾಡಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ತೋರಿಸಿಕೊಟ್ಟವರು. ಯೋಗದ ಪರಿಕಲ್ಪನೆಯೂ ಅದೇ ಆಗಿದೆ ಎಂದರು.
ಸ್ವಾತಂತ್ರ್ಯ ಉದ್ಯಾನದ ಉಸ್ತುವಾರಿ ವಹಿಸಿಕೊಂಡಿರುವ ಅನಂತ ಜೋಷಿ ಮಾತನಾಡಿ, ನಗರಸಭೆ ತಮ್ಮ ಸಂಸ್ಥೆಗೆ ಉದ್ಯಾನದ ನಿರ್ವಹಣೆ ವಹಿಸಿಕೊಟ್ಟ ಬಳಿಕ ಇನ್ನಷ್ಟು ಅಭಿವೃದ್ಧಿಯನ್ನು ಇಲ್ಲಿ ಸಾಧಿಸಲಾಗಿದೆ. ಇನ್ನೊಂದು ಬದಿಯ ಅಭಿವೃದ್ಧಿ ಕಾರ್ಯಗಳಿಗೂ ನಗರಸಭೆ ಸಹಕರಿಸಬೇಕು ಎಂದರು.
ಉದ್ಯಾನದ ಉಸ್ತುವಾರಿಗಳಲ್ಲಿ ಒಬ್ಬರಾದ ಉದ್ಯಮಿ ಪ್ರಹ್ಲಾದ್‌ ಭೂಪಾಳ್‌ ಮುಖ್ಯ ಅತಿಥಿಯಾಗಿದ್ದರು. ಪತಂಜಲಿ ಯೋಗ ಸಮಿತಿಯ ರಾಜ್ಯ  ಯುವ  ಪ್ರಭಾರಿ ಕಿರಣ್‌ ಕುಮಾರ್ ಆರಂಭದಲ್ಲಿ ಯೋಗ ತರಗತಿ ನಡೆಸಿ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟರು. ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್ ಕಾರ್ವಾ, ಹಿರಿಯ ಯೋಗ ಸಾಧಕರಾದ ಅಶೋಕ್‌ ಚಿತ್ರಗಾರ, ವಿಠೋಬ, ಶ್ರೀರಾಮ್‌, ಪ್ರಮೀಳಮ್ಮ  ಮಂಗಳಮ್ಮ,  ಗೌರಮ್ಮ, ಕೃಷ್ಣಾನಾಯ್ಕ್ ,ಪ್ರಕಾಶ ಕುಲಕರ್ಣಿ ಪಾಲ್ಗೊಂಡಿದ್ದರು.
ನಾಗರತ್ನ, ವೆಂಕೋಬ ರಾವ್ ಅವರ ಭಜನೆಗಳು ಭಕ್ತಿ ಭಾವ ಹಾಗೂ ಆತ್ಮಾವಲೋಕನಕ್ಕೆ ಪ್ರೇರಣೆ ಯಾಗಿದ್ದವು.