ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
ರಾಯಚೂರು:ಆ೨೬: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ತನ್ನ ದತ್ತು ಗ್ರಾಮ ವಡವಾಟಿಯಲ್ಲಿ ಗ್ರಾಮಸ್ಥರ ಆರೋಗ್ಯ ಪಾಲನೆಯ ತನ್ನ ಸಾಮಾಜಿಕ ಸೇವಾ ಧ್ಯೇಯೋದ್ದೇಶಗಳ ಭಾಗವಾಗಿ ಗ್ರಾಮಸ್ಥರಿಗಾಗಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಿತ್ತು.
ವಡವಾಟಿ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದರಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶೀತಲ್ ಬಿ ಎಸ್, ಜಿಲ್ಲಾ ನೋಡಲ್ ಅಧಿಕಾರಿ, ಎನ್ ಓ ಹೆಚ್ ಪಿ, ಇವರು ಮನುಷ್ಯನ ಉತ್ತಮ ಹಾಗೂ ಸದೃಢ ಆರೋಗ್ಯ ಪಾಲನೆಯಲ್ಲಿ ಹಲ್ಲುಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಆಹಾರ ಸೇವನೆಗೆ ಅತ್ಯವಶ್ಯಕವಾದ ದಂತಗಳು ವ್ಯಕ್ತಿಯ ಮೊಗ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಹಾಗಾಗಿ ದಂತಗಳ ನಿಯಮಿತ ತಪಾಸಣೆ ಮತ್ತು ಚಿಕಿತ್ಸೆ ಇಂದಿನ ಅಗತ್ಯವಾಗಿದ್ದು ಗ್ರಾಮಸ್ಥರೆಲ್ಲರೂ ಸರಕಾರಿ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮಾಡಿಕೊಟ್ಟಿರುವ ಸದರಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಹೇಳಿ ಲಭ್ಯವಿರುವ ಸರಕಾರದ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಬಿರದ ಸಂಘಟಕ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ತನ್ನ ಸದೃಢ ಸಮಾಜ ನಿರ್ಮಾಣದ ಧ್ಯೇಯವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಸಾಮಾಜಿಕ ಸೇವಾ ಕಳಕಳಿಯ ಭಾಗವಾಗಿ ಆದರಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದು ಗ್ರಾಮದ ಪ್ರತಿಯೊಬ್ಬರೂ ಸಹ ಈ ಶಿಬಿರದ ಪ್ರಯೋಜವನ್ನು ಪಡೆಯಬೇಕು ಅಂದಾಗ ಮಾತ್ರ ಇದೇ ರೀತಿಯ ಮತ್ತಷ್ಟು ಆರೋಗ್ಯ ಸಂಬಂಧಿ ಸೌಲಭ್ಯಗಳನ್ನು ಪೂರೈಸಲು ಸ್ಫೂರ್ತಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಾರಿಯಾರಾಣಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಶ್ರೀಮತಿ ಸ್ವಾತಿ, ಆರೋಗ್ಯ ನಿರೀಕ್ಷಣಾಧಿಕಾರಿ ಇವರು ಅತಿಥಿ ಸ್ಥಾನ ವಹಿಸಿದ್ದರು
ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಉರುಕುಂದಮ್ಮ ಮತ್ತು ಉಮಾದೇವಿ, ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಇಂದು ಸಂಜೆ ೪ ಗಂಟೆಯವರೆಗೂ ಕಾರ್ಯನಿರ್ವಹಿಸಲಿದ್ದು ವಡವಾಟಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಚಿತ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ.