ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಿನ್ನಲೆ, ಶಾಂತಿ ಸಭೆ
ಸಂಜೆ ವಾಣಿ ವಾರ್ತೆ
ಕೊಟ್ಟೂರು:ಅ,26- ಇದೇ ಸೆಪ್ಟಂಬರ್ 7 ರಂದು ಗಣೇಶೋತ್ಸವ ಮತ್ತು ಸೆ.16 ಈದ್ ಮಿಲಾದ್ ಶಾಂತಿಯುತವಾಗಿ ಆಚರಿಸುವ ಹಿನ್ನೆಲೆ ಪೊಲೀಸ್ ಠಾಣೆಯ ಆವರಣದಲ್ಲಿ ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ್ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಡಿವೈಎಸ್ಪಿ  ಮಲ್ಲೇಶ್ ಮಲ್ಲಾಪುರ ಮಾತನಾಡಿ, ಗಣೇಶ ಚತುರ್ಥಿಯನ್ನು ಪ್ರತಿ ವರ್ಷದ ಆಚರಣೆಯ ಸಂಪ್ರದಾಯದಂತೆ ಈ ವರ್ಷ ಆಚರಿಸಬೇಕು. ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಪ್ರತಿಯೊಬ್ಬರು ಎಲ್ಲಾ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯ. ಯಾವುದೇ ರೀತಿಯಾಗಿ ದಾರಿ ಮಧ್ಯದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರಿಗೆ ಓಡಾಡಲು ತೊಂದರೆಯಾಗುವಂತೆ ಮಾಡಬಾರದು ಎಂದು ತಿಳಿಸಿದರು.
ಸಿಪಿಐ ವೆಂಕಟೇಶ್ ಸ್ವಾಮಿ ಮತ್ತು ಪಿಎಸ್ಐ ಗೀತಾಂಜಲಿ ಶಿಂಧೆ ಮಾತನಾಡಿ, ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಪೂರ್ವ ಅನುಮತಿಯನ್ನು ಪಡೆಯಬೇಕು. ಪೂರ್ವ ಅನುಮತಿ ಪಡೆಯದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪ್ರತಿಯೊಬ್ಬರು ಯಾವುದೇ ರೀತಿಯಾಗಿ ಅಹಿತಕರ ಘಟನೆಗಳು ಸಂಭವಿಸದಂತೆ ಗಣೇಶನ ಚತುರ್ಥಿ ಆಚರಣೆ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಇಬಿ ಅಧಿಕಾರಿ ಚೇತನ್ ಕುಮಾರ್,ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಾಲೂಕು ಆಡಳಿತ ಅಧಿಕಾರಿಗಳು, ಅಗ್ನಿಶಾಮಕ ದಳ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಮತ್ತು ಮುಸ್ಲಿಂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.