ಕಾರುಣ್ಯಾಶ್ರಮಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ
ಸಂಜೆವಾಣಿ ವಾರ್ತೆ.
ಸಿಂಧನೂರು,ಆ೨೬: ನಗರದ ಒಳ ಬಳ್ಳಾರಿ ಅಂಧ ಅನಾಥ ಬುದ್ಧಿಮಾಂದ್ಯತೆಯುಳ್ಳವರು ನೆಲೆಸಿದ ಕಾರುಣ್ಯಾಶ್ರಮಕ್ಕೆ ನನ್ನ ಅಧಿಕಾರವಧಿಯಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯ ಗಳನ್ನು ಕೊಡಿಸುವುಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಭರವಸೆ ನೀಡಿದರು.
ಆಶ್ರಮಕ್ಕೆ ಬೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹರೇಟನೂರು ಗ್ರಾಮದ ವೆ. ಅಮರಯ್ಯ ಸ್ವಾಮಿ ನೇತೃತ್ವದಲ್ಲಿ ಒಳಬಳ್ಳಾರಿ ಲಿಂ.ಚನ್ನಬಸವ ಮಹಾಶಿವಯೋಗಿಗಳ ಕನಸಿನಂತೆ ಸಮಾಜದಲ್ಲಿನ ಅನಾಥ, ನೊಂದ ಜೀವಿಗಳ ಮತ್ತು ಅರೆ ನಗ್ನ ಸ್ಥಿತಿಯಲ್ಲಿ ಓಡಾಡುತ್ತಿರುವ ವಯಸ್ಕರ ಬುದ್ಧಿಮಾಂದ್ಯರಿಗೆ ತಮ್ಮದೇ ಆದಂತಹ ಒಂದು ಕುಟುಂಬವನ್ನು ನಿರ್ಮಿಸಿ ಅವರ ಹಿಂದಿನ ನೋವು ಕಷ್ಟಗಳನ್ನು ಮರೆಸುವ ಪ್ರಯತ್ನ ಮಾಡಿರುವ ಕಾರುಣ್ಯ ಕುಟುಂಬವು ಕಾರುಣ್ಯ ಎನ್ನುವ ಪದಕ್ಕೆ ಸಂಪೂರ್ಣ ಅರ್ಥ ಕಲ್ಪಿಸಿ ಕೊಟ್ಟಿದೆ.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಚನ್ನಬಸವ ಸ್ವಾಮಿ ,ಅಶೋಕ ನಲ್ಲ ನನಗೆ ಸಹೋದರರಿದ್ದಂತೆ. ಕಾರುಣ್ಯ ಕುಟುಂಬದ ಸೇವೆಯನ್ನು ಗುರುತಿಸಿ ನಮ್ಮ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಂತಹ ಏಕೈಕ ಸಂಸ್ಥೆ ಎಂದು ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ನಮ್ಮ ಸರ್ಕಾರ ಪ್ರಾಮಾಣಿಕ ಸಮಾಜ ಸೇವಕರುಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಮೂಲ ಉದ್ದೇಶವಾಗಿದೆ.ರಾಜಕಾರಣಿಗಳು ಬರಿ ಭಾಷಣಕಾರರಾಗದೆ ಪ್ರಾಮಾಣಿಕ ಕಾರ್ಯಗಳಿಗೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಿದರೆ ಮಾತ್ರ ರಾಜಕಾರಣಕ್ಕೆ ಅರ್ಥ ಸಿಗುತ್ತದೆ. ಮುಂದಿನ ದಿನಮಾನಗಳಲ್ಲಿ ಸರ್ಕಾರದ ಸೌಲಭ್ಯಗಳ ಜೊತೆ ನನ್ನ ವೈಯಕ್ತಿಕ ಸಹಾಯ ಸಹಕಾರ ಕಾರುಣ್ಯ ಆಶ್ರಮಕ್ಕೆ ನಿರಂತರವಾಗಿರುತ್ತದೆಂದು ಮಾತನಾಡಿ ಹಿರಿಯ ವೃದ್ಧರು ಹಾಗೂ ವಯಸ್ಕರು, ಬುದ್ಧಿಮಾಂದ್ಯರಿಗೆ ಆತ್ಮಸ್ಥೈರ್ಯ ತುಂಬಿ ಹಣ್ಣು ಹಂಪಲುಗಳನ್ನು ವಿತರಿಸಿ ಆಶೀರ್ವಾದ ಪಡೆದರು.
ಇದೇ ಸಮಯದಲ್ಲಿ ಆಶ್ರಮದ ಸಲಹಾ ಸಮಿತಿ ಮುಖಂಡರಾದ ವೀರೇಶ ರಾರಾವಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಆದಿ ಬಸವರಾಜ ಪ್ರಧಾನ ಕಾರ್ಯದರ್ಶಿಗಳು ಜಂಗಮ ಸಮಾಜ,ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ)ಹೊಸಳ್ಳಿ ಕ್ಯಾಂಪ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಕಾರುಣ್ಯ ನೆಲೆ ವೃದ್ದಾಶ್ರಮ. ಮತ್ತು ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ,ಸುಜಾತ ಹಿರೇಮಠ, ಸಿದ್ದಯ್ಯ ಸ್ವಾಮಿ,ಶರಣಮ್ಮ, ಮಲ್ಲಯ್ಯ ಸ್ವಾಮಿ,ಮರಿಯಪ್ಪ ,ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.