ಕಾರು ಡಿಕ್ಕಿಯಾಗಿ ಲಾರಿ ಚಾಲಕ ಸಾವುರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಲಾರಿ ಚಾಲಕರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ ವಿಜಯನಗರ ಆ,26: ಆರ್‍ಟಿಓ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಲಾರಿ ಚಾಲಕನೊಬ್ಬ ಬಲಿಯಾಗಿದ್ದಾನೆ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ದಿಢೀರ್ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ನಡೆದಿದೆ.
ಹೊಸಪೇಟೆ ನಗರದ ಹೊರವಲಯದ ಶನೇಶ್ವರ ದೇವಸ್ಥಾನ ಸಮೀಪದ ಆರ್‍ಟಿಓ ಚೆಕ್ ಪೋಸ್ಟ್‍ನಲ್ಲಿ ಭಾನುವಾರ ಆರ್‍ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕನೊಬ್ಬ ಅಧಿಕಾರಿಗಳಿಗೆ ಲಂಚ ನೀಡಿ, ತನ್ನ ವಾಹನದತ್ತ ಬರುತ್ತಿರುವಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಘಟನೆ ಸಂಭವಿಸುತ್ತಿದ್ದಂತೆ ಆರ್‍ಟಿಓ ಅಧಿಕಾರಿಗಳು ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಇತರೆ ಲಾರಿ ಚಾಲಕರು, ತಮ್ಮ ವಾಹನಗಳನ್ನು ಹೆದ್ದಾರಿಯಲ್ಲೇ ನಿಲ್ಲಿಸಿ, ಕೆಲಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಆರ್‍ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನೆಪದಲ್ಲಿ ಪ್ರತಿಯೊಂದು ಲಾರಿಯಿಂದ ಲಂಚ ವಸೂಲಿ ಮಾಡುತ್ತಿದ್ದಾರೆ. ಅಪಘಾತಕ್ಕೆ ಆರ್‍ಟಿಓ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು. ಈ ಕೂಡಲೇ ಸಾರಿಗೆ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆ, ಟಿಬಿ ಡ್ಯಾಂ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರತಿಭಟನಾಕಾರರ ಮನವೊಲಿಸುವ ಮೂಲಕ ವಾಹನಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.