ಗಾಂಧಿ,, ಬಸವ ತತ್ವಗಳನ್ನು ಅಳವಡಿಸಿಕೊಂಡವರು ಅಕ್ಕಿ ಕೊಟ್ರಪ್ಪ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.26 ಮಹಾತ್ಮ ಗಾಂಧಿ ಮತ್ತು ಬಸವಣ್ಣರ  ಆದರ್ಶಗಳನ್ನು ಅಕ್ಷರಶಹಃ ಮೈಗೂಡಿಸಿಕೊಂಡು ಬದುಕಿ ತೋರಿಸಿದವರು  ಅಕ್ಕಿ ಕೊಟ್ರಪ್ಪನವರ ಎಂದು ಸಂಡೂರು ವಿರಕ್ತ ಮಠದ  ಪ್ರಭುಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ಬಸವಪಥ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಅಕ್ಕಿ ಕೊಟ್ರಪ್ಪರ ನುಡಿ ನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅಕ್ಕಿ ಕೊಟ್ರಪ್ಪ ಅಗಲಿಕೆಯಿಂದ ಧಾರ್ಮಿಕ, ಸಾಹಿತ್ಯ, ಕಲೆ ಮತ್ತು ಶಿಕ್ಷಣ ಕ್ಷೇತ್ರ ಬಡತನ ಕಂಡಂತಾಗಿದೆ.
ಬಡ ಮಕ್ಕಳ ಹಿತಕ್ಕೆ ಶಿಕ್ಷಣದ ಕಾಳಜಿ ವಹಿಸುತ್ತಿದ್ದರು.ಅನೇಕ ಜನಪರ ಹೋರಾಟಗಳಿಗೆ ಮುನ್ನುಡಿ ಹಾಕಿದಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಹಲವಾರು ನಾಯಕರನ್ನು ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯಲ್ಲಿ ಸಾಹುಕಾರರಾಗಿದ್ದರು. ಅವರ ಅದರ್ಶಪ್ರಾಯ ಬದುಕು ಇಂದಿನ ಪೀಳಿಗೆ ಯುವಕರಿಗೆ ಮಾದರಿಯಾಗುತ್ತದೆ ಎಂದರು.
ಸಾಹಿತಿ ಡಿ.ರಾಮನಮಲಿ ಮಾತನಾಡಿ, ದೇವರು ಶ್ರೀಮಂತಿಕೆ ಎಲ್ಲರಿಗೂ ಕೊಡುತ್ತಾನೆ. ಆದರೆ ಹೃದಯ ಶ್ರೀಮಂತಿಕೆ ಉಳ್ಳವರು ಬಹಳ ವಿರಳ ಅದರಲ್ಲಿ ಅಕ್ಕಿ ಕೊಟ್ರಪ್ಪ ಒಬ್ಬರು. ದಾನ ಧರ್ಮ ಮಾಡುವ ಮೂಲಕ ಅವರ ವ್ಯಕ್ತಿತ್ವವನ್ನು ಅಕ್ಷರದಲ್ಲಿ ಎಷ್ಟು ಬೇಕಾದರೂ ಮೌಲ್ಯಗಳನ್ನು ಬರೆಯಬಹುದು, ಮಾತಿನಿಂದ ಏನು ಬೇಕಾದರೂ ಮೌಲ್ಯಗಳನ್ನು ಉಪದೇಶಿಸಬಹುದು ಆದರೆ ಮೌಲ್ಯಗಳನ್ನು ಅಳವಡಿಸಿಕೊಂಡು ನೈತಿಕವಾಗಿ ಬದುಕುವುದು ಸುಲಭ ಸಾಧ್ಯ. , ಅವರು ಬದುಕಿನ ಸಾಧನೆಯನ್ನು ಬರವಣಿಗೆ ಮೂಲಕ ಹೊತ್ತಿಗೆ ತರುವ ಸದಾವಕಾಶ ದೊರೆತ್ತಿದ್ದೆ  ನನ್ನ ಸೌಭಾಗ್ಯ ಎಂದರು.
ಜಿಪಂ ಮಾಜಿ ಸದಸ್ಯ, ಒಡನಾಡಿ ಎಚ್.ಬಿ.ನಾಗನಗೌಡ್ರು ಮಾತನಾಡಿ ಮೌನ ಸಾಧಕನ ಸಾಧನೆಗಳನ್ನು ಜತೆಗಿದ್ದು ಅನುಭವಿಸಿ ಕಂಡಿದ್ದೇನೆ. ಇನ್ಯಾವ ಪದಗಳಿಂದ ಅವರನ್ನು ಬಣ್ಣಿಸಲಿ ಅವರ ಸಾಧನೆಗೆ ಮೌನ ನಮನಗಳನ್ನು ಸಲ್ಲಿಸುವೆ ಎಂದು ಭಾವುಕರಾದರು. ರಂಗ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕೊಟ್ರಪ್ಪನವರು ಬಯಲಾಟದಲ್ಲಿ ಶ್ರೀಕೃಷ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಲ್ಲದೇ ಈ ಭಾಗದ ಕಲಾವಿದರಿಗೆ ಪೋಷಕರಂತಿದ್ದರೆಂದು ಕೆಲವು ಅನುಭವಗಳನ್ನು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡ ಬಾವಿ ಬೆಟ್ಟಪ್ಪ, ಲೇಖಕ ಮಂಜುನಾಥ ಸುಣಗಾರ, ಸಾಹಿತಿ ಮೇಟಿ ಕೊಟ್ರಪ್ಪ ಮಾತನಾಡಿ ನುಡಿ ನಮನ ಸಲ್ಲಿಸಿದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಬಾಚಿಗೊಂಡೆನಹಳ್ಳಿ ತೋಂಟದಾರ್ಯ ಶಾಖಮಠದ ಶಿವಮಹಾಂತ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಅಕ್ಕಿ ಕೊಟ್ರಪ್ಪನವರ ದಾನ, ದಾಸೋಹ, ಧರ್ಮ ಕಾರ್ಯ ಶ್ಲಾಘಿಸಿ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಹನಸಿ ಶಂಕರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಯರ್ರಿಸ್ವಾಮಿ ಮಲ್ಲಾಪುರ ಸಾನ್ನಿಧ್ಯ ವಹಿಸಿದ್ದರು. ಮಾತೆ ಅಕ್ಕಿ ಕೊಟ್ರಮ್ಮ, ಅಕ್ಕಿ ಶಿವಕುಮಾರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಅಕ್ಕಿ ಬಸವರಾಜ, ಅಕ್ಕಿ ತೋಟೇಶ್ ಸೇರಿ ಕುಟುಂಬ ವರ್ಗ, ತಂಬ್ರಹಳ್ಳಿ ಕಾಲೇಜಿನ ವಿದ್ಯಾರ್ಥಿಗಳು, ತಂಬ್ರಹಳ್ಳಿ ಹೋಬಳಿಯ ವಿವಿಧ ಗ್ರಾಮಸ್ಥರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಕ್ಕಿ ಕೊಟ್ರಪ್ಪನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಾರ್ಥನೆ ಶಾರದಾ ಮಂಜುನಾಥ, ಸಂಗೀತಾ ಹಿರೇಮಠ್, ಗುರು ಹಿರೇಮಠ್ ಸಲ್ಲಿಸಿದರು. ಬಸವಪಥದ ಸಂಚಿಶಿವಕುಮಾರ್ ಸತೀಶ್ ಪಾಟೀಲ್, ಗುರುಬಸವರಾಜ ಸೊನ್ನದ್ ಎಸ್.ವಿಶ್ವನಾಥ ನಿರ್ವಹಿಸಿದರು. ಕೊಟ್ರೇಶ್ ಸಕ್ರಿಹಳ್ಳಿ ನಿರೂಪಿಸಿದರು.