ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.26:- ವಿದ್ಯಾರ್ಥಿಗಳನ್ನು ಸಮಾಜಕ್ಕೆ ಬೇಕಾದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರಿನ ಮಾನಸ ಗಂಗೋತ್ರಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಡಿಪಿಬಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1980 – 86 ಅವಧಿಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಪುಟ್ಟಣ್ಣ ಕಣಗಾಲ್ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಗುರುವಂದನಾ ಮತ್ತು ಕಂಪ್ಯೂಟರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಒಡನಾಟ ಉತ್ತಮವಾಗಿದ್ದಲ್ಲಿ ನಮ್ಮ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿಯು ಯಶಸ್ಸಿನ ಹಾದಿಯತ್ತ ಸಾಗಲಿದೆ ಎಂದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾಡುವ ಸೌಲಭ್ಯಗಳ ಕೊರತೆಯ ನಡುವೆಯೂ ಪರಿಶ್ರಮದಿಂದ ಅಭ್ಯಸಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವುದು ಪ್ರಶಂಸನೀಯವಾದ ವಿಷಯವಾಗಿದೆ ಎಂದರು. ತಾವು ಓದಿ ಕಲಿತ ವಿದ್ಯಾಸಂಸ್ಥೆಗೆ ಏನನ್ನಾದರೂ ಸಹಾಯ ಮಾಡಬೇಕೆಂಬ ಮನಸ್ಥಿತಿ ಹಲವರಲ್ಲಿ ಇರುತ್ತದೆ, ಅಂತಹವರನ್ನು ಒಗ್ಗೂಡಿಸಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂದಿನ ವಿದ್ಯಾರ್ಥಿಗಳಿಗೂ ಸೇವಾ ಮನೋಭಾವನೆ ಮೂಡುವಂತೆ ಮಾಡಬೇಕಿದೆ ಎಂದರು. ಈ ರೀತಿಯ ಕಾರ್ಯಕ್ರಮಗಳು ಅತ್ಯಂತ ವಿರಳಾತಿ ವಿರಳವಾಗಿದ್ದು ನಮಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೆ ಕೃತಜ್ಞತಾ ಪೂರಕವಾದ ಧನ್ಯವಾದಗಳನ್ನು ಅರ್ಪಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಡಿ.ಎಸ್.ನರಸಿಂಹಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಗೂಗಲ್, ಮೊಬೈಲ್ ಸಂಸ್ಕೃತಿ 80 ರ ದಶಕದಲ್ಲಿ ಇರಲಿಲ್ಲ, ಆ ದಿನಗಳಲ್ಲಿ ಶಿಕ್ಷಕರು ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಗಳಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಇತ್ತು, ಪಿಯುಸಿ ಅಂಕಗಳ ಆಧಾರದ ಮೇಲೆಯೇ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯಬಹುದಾಗಿತ್ತು ಎಂದರು. ವಿದ್ಯಾರ್ಥಿಗಳು ಬರೆಯುವ ಹವ್ಯಾಸವನ್ನು ಉತ್ತಮಪಡಿಸಿಕೊಂಡಲ್ಲಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವಶಂಕರ್, ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಟಿ.ಹೇಮಂತ್ ಕುಮಾರ್, ಪಿ.ಜೆ.ಮೋಹನ್ ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಎಸ್.ದೇವರಾಜ್, ಟಿ.ಎಸ್.ಶಿವಣ್ಣ, ಡಿ.ಎಸ್.ನರಸಿಂಹಮೂರ್ತಿ, ಜಿ.ಎನ್.ತೋಟಗಿ, ಶೇಖರ್ ಗೌಡ, ಡಿ.ವಿ.ಮೋಹನ್, ವಿಶ್ರಾಂತ ಉಪನ್ಯಾಸಕರಾದ ಎಂ.ವಿ.ವತ್ಸಲಾ, ವಿ. ಜಯಪ್ರಕಾಶ್, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ.ನಾಗರಾಜೇಗೌಡ, ವಿಶ್ರಾಂತ ವೃತ್ತಿ ಶಿಕ್ಷಕ ಎಚ್.ಜೆ.ಚಂದ್ರೇಗೌಡ, ವಿಶ್ರಾಂತ ಕಚೇರಿ ಸಹಾಯಕರಾದ ರಾಮಚಂದ್ರ, ಜವರಪ್ಪ, ಗೋಪಾಲ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಿಯು ಕಾಲೇಜಿನಲ್ಲಿ ನೂತನವಾಗಿ ಆರಂಭಗೊಂಡಿರುವ ಕಂಪ್ಯೂಟರ್ ಶಿಕ್ಷಣ ವಿಭಾಗಕ್ಕೆ 6 ಹೊಸ ಕಂಪ್ಯೂಟರ್ ಗಳನ್ನು ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ವಿಶ್ರಾಂತ ಪ್ರಾಂಶುಪಾಲರು, ವಿಶ್ರಾಂತ ಉಪನ್ಯಾಸಕರು ಮತ್ತು ವಿಶ್ರಾಂತ ಕಚೇರಿ ಸಹಾಯಕರನ್ನು ಸರ್ಕಾರಿ ಪ್ರೌಢಶಾಲಾ ಆವರಣದಿಂದ ಜೂನಿಯರ್ ಕಾಲೇಜ್ ಆವರಣದವರೆಗೆ ಸ್ಕೌಟ್ ಮತ್ತು ಗೈಡ್ಸ್ ಶಾಲಾ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತಂದಿದ್ದು ವಿಶೇಷವಾಗಿತ್ತು.